ಪ್ರಪಂಚದಲ್ಲಿ ನಮಗೆ ತಿಳಿದಿರದ ಅನೇಕ ಸಂಗತಿಗಳಿವೆ. ಹಲವಾರು ಚಿತ್ರ-ವಿಚಿತ್ರವೆನಿಸುವ ವಿಷಯಗಳು ನಮ್ಮ ಕುತೂಹಲವನ್ನು ಹೆಚ್ಚಿಸುತ್ತವೆ.
ಹೀಗೆ ಕುತೂಹಲ ಮೂಡಿಸುವ ದ್ವೀಪವೊಂದು(House Of Snakes) ಬ್ರೆಜಿಲ್(Brazil) ದೇಶದಲ್ಲಿದೆ. ಆಧುನಿಕತೆ ತಂತ್ರಜ್ಞಾನ(Technology) ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವು ನಿಗೂಢತೆಗಳು ನಿಗೂಢವಾಗಿಯೇ ಉಳಿದಿವೆ.

ಕೆಲವು ನಿಗೂಢತೆಗಳನ್ನು ನಾವೇ ಕಾಯ್ದುಕೊಂಡಿದ್ದು, ಇನ್ನೂ ಕೆಲವು ಭೇದಿಸಲಾರದ್ದು. ಮಾನವ ನಿರ್ಮಿತ ಸ್ಥಳಗಳು, ಕಟ್ಟಡಗಳಿಂದ ಹಿಡಿದು ನೈಸರ್ಗಿಕ ಪ್ರದೇಶಗಳವರೆಗೆ ಕೆಲವೊಂದು ತಾಣಗಳು ಮಾನವನ ಪ್ರಯತ್ನವನ್ನೂ ಮೀರಿ ರಹಸ್ಯವಾಗಿಯೇ ಉಳಿದಿವೆ.
ಬ್ರೆಜಿಲ್ ನ ‘ಎಲ್ಹಾ ಡಾ ಕ್ಯೂಮಾದಾ’(Ilha da Queimada Grande) ಎನ್ನುವ ಈ ದ್ವೀಪ ‘ಹೌಸ್ ಆಫ್ ಸ್ನೇಕ್ಸ್’(House Of Snakes) ಅಥವಾ ಹಾವಿನ ದ್ವೀಪ ಅಂತಲೇ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ.
ಈ ದ್ವೀಪದಲ್ಲಿ ಅತ್ಯಂತ ಅಪಾಯಕಾರಿ ಮತ್ತು ವಿಷಯುಕ್ತ ಹಾವುಗಳು ಕಂಡುಬರುತ್ತದೆ. ಹೀಗಾಗಿ ಈ ದ್ವೀಪಕ್ಕೆ ಮನುಷ್ಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಜಗತ್ತಿನ ಭಯಾನಕ ಸ್ಥಳ ಎಂದೇ ಕುಖ್ಯಾತವಾಗಿರುವ ಈ ದ್ವೀಪ, ಸಾವಿರಾರು ಹಾವುಗಳು ಮುತ್ತಿಕೊಂಡಿರುವ ಅಪಾಯಕಾರಿ ಭಯಾನಕ ಜಾಗ. ಹಾಗಾಗಿ ಬ್ರೆಜಿಲ್ ರಾಷ್ಟ್ರ ಈ ದ್ವೀಪಕ್ಕೆ ಜನರ ಭೇಟಿಯನ್ನು ಕಾನೂನು ಬಾಹಿರವೆಂದು ಘೋಷಿಸಿದೆ. ನೀವು ಈ ತಾಣದ ಅಪಾಯವನ್ನು ಊಹಿಸುವುದು ಖಂಡಿತ ಅಸಾಧ್ಯ. ಈ ಡೆಡ್ಲಿ ಹಾವಿನ ದ್ವೀಪದಲ್ಲಿ ಹಲವಾರು ಪ್ರಭೇದದ ವಿಷಕಾರಿ ಹಾವುಗಳಿವೆ.

ಇಲ್ಲಿರುವ ಹಾವಿನ ಪ್ರಭೇದದಲ್ಲಿರುವುದು ಜಗತ್ತಿನ ಅತ್ಯಂತ ಮಾರಕ ಎಂದೆನಿಸಿರುವ ಹಾವುಗಳು! ಬ್ರೆಜಿಲ್ನ ತೀರ ಪ್ರದೇಶ ಸಾಯೋ ಪಾಲೋದಿಂದ 93 ಮೈಲಿಗಳ ದೂರದಲ್ಲಿದೆ ಈ ಭಯಾನಕ ಸ್ನೇಕ್ ಐಲ್ಯಾಂಡ್. ಇಲ್ಲಿ ಹೋಗಲು ಒಂದು ವೇಳೆ ಅನುಮತಿ ಕೊಟ್ರೂ ಕಾಲಿಡುವುದಕ್ಕೆ ಅಸಾಧ್ಯ. ಏಕೆಂದರೆ ಅಲ್ಲಿ ಕಾಲಿಡಲು ಜಾಗವೇ ಇಲ್ಲ, ಪ್ರತಿ 10 ಚದರ ಅಡಿಗೂ 1 ರಿಂದ 5 ಹಾವುಗಳು ಇದ್ದೇ ಇರುತ್ತವೆ! ಅದರಲ್ಲೂ ಕಚ್ಚಿದರೆ ಮಾಂಸವೇ ಕಿತ್ತು ಬರುವಂತ ಬಲಿಷ್ಠ ಹಾವುಗಳು, ವಿಷ ಉಗುಳುವ ಅತಿ ಅಪಾಯಕಾರಿ ಹಾವುಗಳು ಇಲ್ಲಿವೆ ಎಂದು ವರದಿ ಹೇಳುತ್ತದೆ.
ಈ ಹಿಂದೆ ಈ ದ್ವೀಪದಲ್ಲಿ ಒಂದು ಲೈಟ್ ಹೌಸ್ ನಿರ್ಮಿಸಲಾಗಿತ್ತು. ಹಾಗೆಯೇ ದ್ವೀಪವನ್ನು ನೋಡಿಕೊಳ್ಳಲೆಂದು ಅಧಿಕಾರಿಯನ್ನು ನೇಮಕ ಮಾಡಿದ್ದರು. ಆದರೆ ಒಂದು ದಿನ ಅಚಾನಕ್ ಆಗಿ ಇವರು ವಾಸಿಸುತ್ತಿರುವ ಮನೆ ಕಿಟಕಿ ಒಡೆದು, ಸಾವಿರಾರು ಹಾವುಗಳು ಮನೆ ಪ್ರವೇಶಿಸಿತ್ತು. ಇದರಿಂದ ಇಡೀ ಕುಟಂಬ ಹಾವಿನ ದಾಳಿಗೆ ತುತ್ತಾಗಿತ್ತು. ಮರುದಿನ ಅಧಿಕಾರಿಗೆ ಆಹಾರ ಸಾಮಗ್ರಿಗಳನ್ನು ನೀಡಲು ಹೋದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಹಾವಿನ ದಾಳಿಗೆ ಒಳಗಾಗಿದ್ದ ಇಡೀ ಕುಟುಂಬದವರ ದೇಹಗಳು ವಿಷದಿಂದ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತಿರುವಂತೆ ಬಿದ್ದಿತ್ತು.

ಇದಾದ ಬಳಿಕ ಲೈಟ್ ಹೌಸ್ನ್ನು ಶಾಶ್ವತವಾಗಿ ಮುಚ್ಚಲಾಯಿತು. ಆ ಬಳಿಕ ಈ ದ್ವೀಪ ನೋಡಿಕೊಳ್ಳಲು ಯಾವುದೇ ಅಧಿಕಾರಿಯನ್ನು ನೇಮಿಸಿಲ್ಲ. ಇಲ್ಲಿ ಈಗ ಹಾವುಗಳದ್ದೇ ಸಾಮ್ರಾಜ್ಯ.
ಹೆಸರು ಕೇಳಿದರೆ ನಡುಕ ಹುಟ್ಟಿಸುವ, ಪಿಟ್ ವೈಪರ್ ಹಾವುಗಳು ಇತ್ತೀಚಿನ ವರ್ಷಗಳಲ್ಲಿ ಈ ದ್ವೀಪದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ ಎನ್ನಲಾಗಿದೆ. ಮನುಷ್ಯರನ್ನು ಭಯಭೀತರನ್ನಾಗಿಸುವ ಜಗತ್ತಿನ ಏಕೈಕ ದ್ವೀಪವಾದ ‘ಎಲ್ಹಾ ಡಾ ಕ್ಯೂಮಾದಾ’ನಲ್ಲಿ ಇಂದು ಹಾವುಗಳೇ ರಾಜ್ಯಭಾರ ಮಾಡುತ್ತಿದೆ.
ಇದರ ಹೊರತಾಗಿಯೂ ಪ್ರತಿವರ್ಷ ವಿಜ್ಞಾನಿಗಳಿಗೆ ಮುಂಜಾಗೃತೆಯೊಂದಿಗೆ ಇಲ್ಲಿಗೆ ಅಧ್ಯಯನಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ.
- ಪವಿತ್ರ ಸಚಿನ್