ಇಂದು ರಾಷ್ಟ್ರಪತಿ ಚುನಾವಣೆ ; ಮತ ಎಣಿಕೆ ಹೇಗೆ? ಇಲ್ಲಿದೆ ಮಾಹಿತಿ

President Election

ಭಾರತದ ಸಂವಿಧಾನದ(Indian Constitution) 52ನೇ ಪರಿಚ್ಛೇದದಲ್ಲಿ ರಾಷ್ಟ್ರಪತಿ(President) ಪದವಿಯ ಬಗ್ಗೆ ತಿಳಿಸಲಾಗಿದೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಭಾರತದ ಅಧ್ಯಕ್ಷರಾಗಿರುತ್ತಾರೆ ಮತ್ತು ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿರುತ್ತಾರೆ. ಈ ಹುದ್ದೆಗೆ ಸ್ಪರ್ಧೆ ಮಾಡುವವರು 35 ವರ್ಷ ವಯಸ್ಸು ದಾಟಿದ್ದು, ಲೋಕಸಭಾ ಸದಸ್ಯನಾಗಲು(Loksabha Member) ಬೇಕಾಗುವ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಇನ್ನೂ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

ಇನ್ನು ರಾಷ್ಟ್ರಪತಿ ಚುನಾವಣೆಗೆ(Presidential Election) ನಾಮಪತ್ರ(Nomination) ಸಲ್ಲಿಸಲು ೫೦ ಜನ ಸಂಸತ್‌ ಸದಸ್ಯರು ಸೂಚಕರಾಗಿ ಮತ್ತು ೫೦ ಜನ ಸದಸ್ಯರು ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ರಾಷ್ಟ್ರಪತಿ ಚುನಾವಣೆ ಭಾರತದ ಸಂವಿಧಾನದ ವಿಧಿ 54ರ ಪ್ರಕಾರ ನಡೆಯುತ್ತದೆ. ಸಂಸತ್ತಿನ ಎರಡು ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರು ಮಾತ್ರ ಮತದಾನ ಮಾಡಬಹುದು.

ರಾಜ್ಯ ವಿಧಾನಪರಿಷತ್ ಸದಸ್ಯರು, ಮತ್ತು ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ. ಇನ್ನು ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ಆದರೆ ಭಾರತದ ಚುನಾವಣಾ ಆಯೋಗ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಮತ ಪತ್ರ ಮೂಲಕ ಮತದಾನ ನಡೆಯುತ್ತದೆ. ಇನ್ನು ಪ್ರಸ್ತುತ ಭಾರತದಲ್ಲಿ ಎಲ್ಲ ರಾಜ್ಯಗಳ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ.

ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಲಭ್ಯವಾಗುತ್ತದೆ. ಸಂಸತ್‌ ಸದಸ್ಯರ ಮತ ಮೌಲ್ಯ 708 ಆಗಿದೆ. ಇನ್ನೂ ಶಾಸಕರ ಮತ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಮತದಾರರು ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1, 2, 3 ಮತ್ತು ಇನ್ನಿತರ ಸ್ಥಾನಗಳನ್ನು ನೀಡುವ ಮೂಲಕ ಪ್ರಾಶಸ್ತ್ಯದ ಮತಗಳನ್ನು ನೀಡಬೇಕು. ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯೂ ಕೂಡಾ ವಿಭಿನ್ನವಾಗಿದೆ.

ಮತವನ್ನು ಮಾನ್ಯವೆಂದು ಪರಿಗಣಿಸುವ ಮೊದಲ ಆದ್ಯತೆಯನ್ನು ಗುರುತಿಸುವುದು ಕಡ್ಡಾಯವಾಗಿದೆ. ಇಲ್ಲಿ ಗೆದ್ದವರು ಗರಿಷ್ಠ ಮತಗಳನ್ನು ಪಡೆದಿರುವುದಿಲ್ಲ. ಆದರೆ ನಿರ್ದಿಷ್ಟ ಕೋಟಾಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುತ್ತಾರೆ. ಮಾನ್ಯವಾದ ಮತಗಳನ್ನು 2 ರಿಂದ ಭಾಗಿಸಿ, ಅಂಶಕ್ಕೆ 1ನ್ನು ಸೇರಿಸುವ ಮೂಲಕ ಕೋಟಾವನ್ನು ನಿರ್ಧರಿಸಲಾಗುತ್ತದೆ. ನಿಗದಿ ಕೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆದರೆ ವಿಜೇತ ಎಂದು ಘೋಷಿಸಲಾಗುತ್ತದೆ.

Exit mobile version