Kolkata: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಎರಡು ಸ್ಥಾನಗಳನ್ನು ನೀಡಲು ನಾವು ಮುಂದಾಗಿದ್ದೇವು. ಆದರೆ ಅವರು ಹೆಚ್ಚಿನ ಸ್ಥಾನಗಳನ್ನು ಬಯಸಿದರು. ಹೀಗಾಗಿ ಮಾತುಕತೆ ಮುರಿದು ಬಿದ್ದಿತು ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banerjee) ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟ (I.N.D.I.A Alliance) ತೊರೆದು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ನೊಂದಿಗಿನ ಮೈತ್ರಿ ಮುರಿದು ಬಿದ್ದ ಕಾರಣವನ್ನು ವಿವರಿಸಿರುವ ಅವರು, ನಾವು ಮಾಲ್ಡಾದಲ್ಲಿ ಕಾಂಗ್ರೆಸ್ಗೆ 2 ಸ್ಥಾನಗಳನ್ನು ನೀಡಲು ಬಯಸಿದ್ದೇವು. ಆದರೆ ಅವರು ಹೆಚ್ಚಿನದನ್ನು ಬಯಸಿ, ನಮ್ಮ ಬೇಡಿಕೆಯನ್ನು ತಿರಸ್ಕರಿಸಿದರು. ಹೀಗಾಗಿ ಸೀಟು ಹಂಚಿಕೆಯ ಮಾತುಕತೆಯು ಮೈತ್ರಿ ಮುರಿದು ಬೀಳಲು ಕಾರಣವಾಯಿತು.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಶಾಸಕನಿಲ್ಲದ ಕಾರಣ ಟಿಎಂಸಿ (TMC) ಮಾಲ್ಡಾದಲ್ಲಿ ಕಾಂಗ್ರೆಸ್ಗೆ ಎರಡು ಸ್ಥಾನಗಳನ್ನು ಬಿಟ್ಟು ಕೊಡಲು ಪ್ರಸ್ತಾಪಿಸಿದೆ. ಇನ್ನು ನಿಮ್ಮನ್ನು ಗೆಲ್ಲಿಸಲು ನಾವು ಸಹಾಯ ಮಾಡುತ್ತೇವೆ ಎಂದು ನಾವು ಅವರಿಗೆ ಹೇಳಿದ್ದೇವೆ. ಅವರು ನಮ್ಮ ಬೇಡಿಕೆಯನ್ನು ತಿರಸ್ಕರಿಸಿದರು ಮತ್ತು ಅವರಿಗೆ ಹೆಚ್ಚಿನ ಸ್ಥಾನಗಳು ಬೇಕು ಎಂದು ಹೇಳಿದರು. ಆದರೆ, ಅವರು ಸಿಪಿಎಂ ತೊರೆಯದ ಹೊರತು ನಾನು ಒಂದೇ ಒಂದು ಸ್ಥಾನವನ್ನು ನೀಡುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಮಮತಾ ಅವರು ಹೇಳಿದರು.
“ನನಗೆ ಸಾಕಷ್ಟು ಚಿತ್ರಹಿಂಸೆ ನೀಡಿದ ಪಕ್ಷವಾದ ಸಿಪಿಎಂ ಅನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಕಾಂಗ್ರೆಸ್ ಸಿಪಿಎಂನೊಂದಿಗೆ ಮೈತ್ರಿ ಮಾಡಿಕೊಳ್ಳುವುದಾದರೆ, ನಾವು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಮ್ಮ ಜೊತೆ ಬಂದರೆ ನಾವು ಎರಡು ಸ್ಥಾನಗಳನ್ನು ಅವರಿಗೆ ಬಿಟ್ಟು ಕೊಡುತ್ತೇವೆ. ಸಿಪಿಎಂ (CPM) ತೊರೆಯದ ಹೊರತು ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ಗೆ ನೀಡುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿಯೇ ಸ್ಪರ್ಧೆ ಮಾಡುತ್ತೇವೆ. ಬಿಜೆಪಿ (BJP), ಕಾಂಗ್ರೆಸ್, ಸಿಪಿಎಂ ಪಕ್ಷಗಳನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.