ಈ ಹಿಂದೆ ತೈಲ ಬೆಲೆ ಏರಿಕೆಯಾದಾಗ ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದ BJP ಅವರು ಈಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದಾರೆ?

ಬೆಂಗಳೂರು, ಫೆ.13: ಯುಪಿಎ ಆಡಳಿತ ಅವಧಿಯಲ್ಲಿ ತೈಲ ಬೆಲೆ ಒಂದು ಪೈಸೆ ಹೆಚ್ಚಾದರೂ ಹಾದಿ ರಂಪ-ಬೀದಿ ರಂಪ ಮಾಡುತ್ತಿದ್ದ ಬಿಜೆಪಿ ನಾಯಕರು ಈಗೇನು ಬಾಯಿಗೆ ಕಡುಬು ತುರುಕಿಕೊಂಡಿದ್ದಾರೆಯೇ? ಎಂದು ಶಾಸಕ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, 1 ನಮ್ಮ ಯುಪಿಎ ಆಡಳಿತಾವಧಿಯಲ್ಲಿ ತೈಲಬೆಲೆ ಒಂದೇ ಒಂದು ಪೈಸೆ ಏರಿಕೆಯಾದರೂ ಹಾದಿ ರಂಪ-ಬೀದಿ ರಂಪ ಮಾಡುತ್ತಿದ್ದ BJP ನಾಯಕರು ಈಗೇನು ಬಾಯಿಗೆ ಕಡುಬು ತುರುಕಿಕೊಂಡಿದ್ದಾರೆಯೇ? ತೈಲಬೆಲೆ ಈಗ ಶತಕದ ಸಮೀಪ ಬಂದಿದೆ. ಹಿಂದೆಲ್ಲಾ ತೈಲ ಬೆಲೆ ಏರಿಕೆಯಾದಾಗ ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದ BJP ಯವರು ಈಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದಾರೆ? ಎಂದು ಟೀಕಿಸಿದ್ದಾರೆ.

C.T.ರವಿಯವರು ತೈಲವನ್ನು ಅಗ್ಗದ ದರದಲ್ಲಿ ಕೊಡಲು ಕೊಲ್ಲಿ ರಾಷ್ಟ್ರಗಳಲ್ಲಿ ನಮ್ಮ ಸಂಬಂಧಿಕರಿಲ್ಲ ಎಂದು ಈ ಹಿಂದೆ ಹೇಳಿದ್ದರು. ನಮ್ಮ ಸರ್ಕಾರವಿದ್ದಾಗ ತೈಲವನ್ನು ಅಗ್ಗದ ದರದಲ್ಲಿ ಕೊಡಲು ಕೊಲ್ಲಿ ರಾಷ್ಷ್ಟ್ರಗಳಲ್ಲಿ C.T.ರವಿಯವರ ಸೋದರ ಮಾವ ಇದ್ದರೆ? ನಮ್ಮ ಸರ್ಕಾರವಿದ್ದಾಗ ಕಚ್ಛಾ ತೈಲದ ಬೆಲೆ ಎಷ್ಟಿತ್ತು‌‌? ಈಗ ಎಷ್ಟಿದೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ದುರಾಡಳಿತದಿಂದ ಇಂದು ಜನ ಹಿಡಿಶಾಪ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಕೇವಲ ತೈಲ ಬೆಲೆಯಷ್ಟೇ ಅಲ್ಲ,ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿ ಜನ ತಮ್ಮ ಜೀವನ ಸಾಗಿಸುವುದೇ ದುಸ್ತರವಾಗಿದೆ. ಇದೇನಾ BJPಯವರು ಹೇಳುತ್ತಿದ್ದ ಅಚ್ಛೇ ದಿನ್?ಆತ್ಮಸಾಕ್ಷಿಯನ್ನೇ ಆತ್ಮಹತ್ಯೆ ಮಾಡಿಸಿಕೊಂಡಿರುವ BJP ಯವರಿಂದ ಜನರ ಉದ್ಧಾರ ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.

Exit mobile version