ದೇಶದಲ್ಲಿ ನಿಲ್ಲದ ಕೊರೊನಾ ಕಂಟಕ: ಕಳೆದ 24 ಗಂಟೆಗಳಲ್ಲಿ 53,480 ಹೊಸ ಪ್ರಕರಣ ಪತ್ತೆ; 354 ಮಂದಿ ಬಲಿ

ಬೆಂಗಳೂರು, ಮಾ. 31: ದೇಶದಲ್ಲಿ ಭಾರೀ ಆತಂಕ ಸೃಷ್ಟಿಸಿರುವ ಕೊರೊನಾ ಎರಡನೇ ಅಲೆಯ ಅಬ್ಬರ ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ದೊಡ್ಡಮಟ್ಟದ ಏರಿಕೆಯಾಗುತ್ತಿದೆ. ಪರಿಣಾಮ ಕಳೆದ 24 ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಮಹಾಮಾರಿಗೆ ತುತ್ತಾಗಿದ್ದು, ಜನರ ಆತಂಕ ಹೆಚ್ಚಿಸಿದೆ.

ಕೋವಿಡ್-19 ವೈರಸ್ ಹರಡದಂತೆ ದೇಶಾದ್ಯಂತ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 53,480 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 354 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ.

ಸದ್ಯ ದೇಶದಲ್ಲಿ ಈವರೆಗೂ ಒಟ್ಟು 1,21,49,335 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇದುವರೆಗೆ ಒಟ್ಟು 1,14,34,301 ಜನ ಕೊರೊನಾ ಸೋಂಕಿನಿಂದ ಪಾರಾಗಿದ್ದಾರೆ. ಹೀಗಾಗಿ ಸದ್ಯ ದೇಶದಲ್ಲಿ ಒಟ್ಟು
5,52,566 ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ಇದುವರೆಗೆ 1,62,468 ಮಂದಿ ಬಲಿಯಾಗಿದ್ದಾರೆ.

ಇನ್ನೂ ದೇಶದಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಇದರ ನಡುವೆ ಕೊರೊನಾ‌ ಲಸಿಕೆ ನೀಡುವ ಪ್ರಕ್ರಿಯೆ ಸಹ ವೇಗವಾಗಿ ನಡೆಯುತ್ತಿದೆ. ಅದರಂತೆ ದೇಶದಲ್ಲಿ ಈವರೆಗೂ ಒಟ್ಟು 6,30,54,353 ಜನರಿಗೆ ಕೊರೊನಾ ವ್ಯಾಕ್ಸಿನೇಷನ್‌ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕರ್ನಾಟಕದಲ್ಲೂ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚಿದ್ದು, ಮಂಗಳವಾರ ಸಂಜೆ ವೇಳೆಗೆ ರಾಜ್ಯದಲ್ಲಿ 2,975 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ 1,984 ಹೊಸ ಪ್ರಕರಣ ಪತ್ತೆಯಾಗಿದ್ದರೆ. ಬೀದರ್, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ.

ಹೀಗಾಗಿ ಕರ್ನಾಟಕದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 9,92,779ಕ್ಕೆ ಏರಿಕೆ ಆಗಿದ್ದು, ಮಾ.30ರಂದು 1262 ಮಂದಿ ಗುಣಮುಖರಾಗಿದ್ದು, ಇದುವರೆಗೂ 9,54,678 ಮಂದಿ
ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 25,541ಕ್ಕೆ ಏರಿದ್ದು, ಇದುವರೆಗೆ ರಾಜ್ಯದಲ್ಲಿ 12,541 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

Exit mobile version