ಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರು

india
ಕಾಮನ್ ವೆಲ್ತ್ ಗೇಮ್ಸ್ 2022(Commonwealth Games 2022) ರಲ್ಲಿ ಭಾರತ(India) ಚಿನ್ನದ ಬೇಟೆ ಮುಂದುವರಿಸಿದ್ದು, ಕುಸ್ತಿಪಟುಗಳ ಅಮೋಘ ಪ್ರದರ್ಶನದಿಂದ ಒಂದೇ ದಿನ 3 ಚಿನ್ನ ಹಾಗೂ 1 ಬೆಳ್ಳಿ ಪದಕಗಳು ಭಾರತದ ಪಾಲಾಗಿದೆ.
ಕಾಮನ್‌ವೆಲ್ತ್‌ ಕ್ರೀಡಾಕೂಟದ ಎಂಟನೇ ದಿನವಾದ ಶುಕ್ರವಾರ ಭಾರತದ ಕುಸ್ತಿಪಟುಗಳು(Wrestlers) ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಭಜರಂಗ್‌ ಪೂನಿಯಾ(Bajrang Punia), ದೀಪಕ್‌ ಪೂನಿಯಾ(Deepak Punia) ಹಾಗೂ ಸಾಕ್ಷಿ ಮಲಿಕ್(Sakshi Malik) ಆಯಾ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರ ಜೊತೆಗೆ ಅಂಶು ಮಲಿಕ್‌ ಅವರು ಫೈನಲ್ ನಲ್ಲಿ ಸೋಲುವ ಮೂಲಕ ಕಾಮನ್‍ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಬೇಕಾಯಿತು. ಭಾರತದ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪೂನಿಯಾ ಅವರು ಪುರುಷರ 65 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಲ್ಯಾಚ್ಲನ್‌ ಮೆಕ್‌ನೀಲ್ ವಿರುದ್ಧ ಗೆಲ್ಲುವ ಮೂಲಕ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು.
ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತೀಯ ಕುಸ್ತಿಪಟು ಪ್ರಾಬಲ್ಯ ಸಾಧಿಸಿದರು. ಪಂದ್ಯದ ಆರಂಭಿಕ ಹಂತದಲ್ಲಿ ಪೂನಿಯಾ, ಎದುರಾಳಿ ಕುಸ್ತಿಪಟುವಿಗೆ ಸ್ಕೋರ್‌ ಮಾಡಲು ಅವಕಾಶ ನೀಡಲಿಲ್ಲ.

ಹಾಗಾಗಿ, ಮೊದಲನೇ ಅವಧಿಯಲ್ಲಿ ಅವರು 4-0 ಮುನ್ನಡೆ ಪಡೆದರು. ಎರಡನೇ ಅವಧಿಯಲ್ಲಿ ಲ್ಯಾಚ್ಲನ್ ಅವರು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿ 2-4 ಅಂತರವನ್ನು ಕಾಯ್ದುಕೊಂಡರು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡ ಭಜರಂಗ್‌, ತಮ್ಮ ಅಂಕಪಟ್ಟಿಗೆ ಇನ್ನೆರಡು ಅಂಕಗಳನ್ನು ಸೇರಿಸಿದರು. ಅಂತಿಮವಾಗಿ 9-2 ಭಾರಿ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಜರಂಗ್‌ ಪೂನಿಯಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ರಾಷ್ಟ್ರಕ್ಕೆ ಚಿನ್ನದ ಪದಕ ತಂದುಕೊಟ್ಟ ಭಜರಂಗ್ ಪೂನಿಯಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(Draoupadi Murmu), ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂತೆ ಹಲವು ಗಣ್ಯರು ಟ್ವೀಟ್(Tweet) ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಮತ್ತೊರ್ವ ಸ್ಟಾರ್‌ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಮಹಿಳೆಯರ 62 ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಸಾಕ್ಷಿ ಮಲಿಕ್, ಕೆನಡಾದ ಅನಾ ಗೊಡಿನೆಝ್‌ ಅವರ ವಿರುದ್ದ ಗೆದ್ದರು.


ಭಜರಂಗ್‌ ಪೂನಿಯಾ ಹಾಗೂ ಸಾಕ್ಷಿ ಮಲಿಕ್‌ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆನ್ನಲ್ಲೆ, ಭಾರತದ ಮತ್ತೊರ್ವ ಸ್ಟಾರ್‌ ಕುಸ್ತಿಪಟು ದೀಪಕ್‌ ಪೂನಿಯಾ ಕೂಡ ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡರು. ಶುಕ್ರವಾರ ನಡೆದಿದ್ದ ಪುರುಷರ 86 ಕೆ.ಜಿ ಫ್ರೀಸ್ಟೈಲ್ ಫೈನಲ್‌ ಹಣಾಹಣಿಯಲ್ಲಿ ದೀಪಕ್‌ 3-0 ಅಂತರದಲ್ಲಿ ಪಾಕಿಸ್ತಾನದ ಮಹಮ್ಮದ್‌ ಇನಾಮ್‌ ಅವರು ವಿರುದ್ಧ ಗೆಲುವು ಪಡೆದರು. ಆ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಆ ಮೂಲಕ ಭಾರತಕ್ಕೆ ಎಂಟನೇ ದಿನ ಕುಸ್ತಿ ವಿಭಾಗದಿಂದ ಮೂರು ಪದಕಗಳು ಬಂದವು.

ಅದೇ ರೀತಿ ಅಂಶು ಮಲಿಕ್‌ ಅವರು ಶುಕ್ರವಾರ ನಡೆದ ವನಿತೆಯರ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ನೈಜಿರಿಯಾದ ಒಡುನಾಯೊ ಫೊಲೊಸಡೆ ಅಡೆಕುರಿಯೊ ವಿರುದ್ಧ 4-6 ಅಂಕಗಳಿಂದ ಸೋಲುಂಡು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಒಟ್ಟಾರೆ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಇಲ್ಲಿಯವರೆಗೂ 26 ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಇದರಲ್ಲಿ 9 ಚಿನ್ನ, 8 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿವೆ.
Exit mobile version