ನವದೆಹಲಿ : ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿ ಮಾಡಿ, ಪಶ್ಚಿಮ ಬಂಗಾಳಕ್ಕೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ(Central Government) ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇದೇ ವೇಳೆ ಮೋದಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಬಂಗಾಳ ರಾಜ್ಯಕ್ಕೆ ನೀಡಬೇಕಾದ 1,00,968.44 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಅಕ್ರಮ ಹಣ ವರ್ಗಾವಣೆ(Illegal Money Transfer) ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಮಮತಾ ಬ್ಯಾನರ್ಜಿ ಮತ್ತು ಪಿಎಂ ಮೋದಿ ನಡುವೆ ಈ ಸಭೆ ನಡೆದಿದೆ. ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ತಮ್ಮ ಪಕ್ಷದ ಸಂಸದರನ್ನು ಭೇಟಿ ಮಾಡಿ, ಪ್ರಸ್ತುತ ಸಂಸತ್ತಿನ ಅಧಿವೇಶನ ಮತ್ತು 2024 ರ ಲೋಕಸಭೆ ಚುನಾವಣೆಯ ಹಾದಿಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಯವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು. ಮಮತಾ ಬ್ಯಾನರ್ಜಿ ಅವರು ನಾಲ್ಕು ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಬ್ಯಾನರ್ಜಿ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರನ್ನು ಭೇಟಿಯಾಗಲಿದ್ದಾರೆ. ನಂತರ ಅವರು ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 8 ರಂದು ವಿರೋಧ ಪಕ್ಷದ ನಾಯಕರ ಜತೆ ಸಭೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.