ಭಾರತ-ಇಂಗ್ಲೆಂಡ್ ಟಿ20 ಕ್ರಿಕೆಟ್: ಮುಂದಿನ ಮೂರು ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗಿಲ್ಲ ಅವಕಾಶ

ಬೆಂಗಳೂರು, ಮಾ. 16: ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಆತಂಕ ಸದ್ದಿಲ್ಲದೆ ಶುರುವಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಸಂಭ್ರಮದ ಮೇಲೂ ಕೊರೊನಾ ಕರಿನೆರಳು ಆವರಿಸಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಹೀಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಪ್ರವಾಸಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧದ ಮುಂದಿನ ಮೂರು ಟಿ20 ಕ್ರಿಕೆಟ್ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ.

ಗುಜರಾತ್‌ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸರಣಿಯ 3ನೇ ಪಂದ್ಯ ಇಂದು(ಮಾ.16) ನಡೆಯಲಿದೆ. ಹೀಗಾಗಿ ಇಂದಿನ ಪಂದ್ಯವನ್ನ ಪ್ರೇಕ್ಷಕರಿಲ್ಲದೇ ನಡೆಸಲು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದ್ದು, ಈಗಾಗಲೇ ಟಿಕೆಟ್ ಖರೀದಿಸಿರುವ ಪ್ರೇಕ್ಷಕರಿಗೆ ಹಣ ಹಿಂದಿರುಗಿಸಲು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ.

ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿವೆ.‌

Exit mobile version