ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ: ಮೊದಲೆರಡು ಟೆಸ್ಟ್ ಪಂದ್ಯಕ್ಕೆ 17 ಆಟಗಾರರ ಇಂಗ್ಲೆಂಡ್ ತಂಡ ಪ್ರಕಟ

ಹೊಸದಿಲ್ಲಿ, ಜು. 22: ಪ್ರವಾಸಿ ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ತಂಡಗಳ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದ್ದು, ಟೀಂ ಇಂಡಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಘೋಷಿಸಲಾಗಿದೆ.

ಬಲಿಷ್ಠ ಟೀಂ‌ ಇಂಡಿಯಾವನ್ನ ತವರಿನಲ್ಲಿ ಮಣಿಸುವ‌ ನಿರೀಕ್ಷೆ ಹೊಂದಿರುವ ಇಂಗ್ಲೆಂಡ್, ಇದಕ್ಕಾಗಿ ಬಲಿಷ್ಠ ತಂಡವನ್ನೇ ಕಟ್ಟಿಕೊಂಡು ಕಣಕ್ಕಿಳಿಯಲು ತಯಾರಾಗಿದೆ. ಈ ನಿಟ್ಟಿನಲ್ಲಿ ಜೋ ರೂಟ್ ನಾಯಕತ್ವದಲ್ಲಿ 17 ಸದಸ್ಯರ ತಂಡವನ್ನು
ಇಂಗ್ಲೆಂಡ್ ಮಂಡಳಿ ಪ್ರಕಟಿಸಿದೆ.

ಜೋ ರೂಟ್ ನಾಯಕತ್ವದಲ್ಲಿ ಮುನ್ನಡೆಯುವ ತಂಡಕ್ಕೆ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕುರ್ರನ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಸರಣಿ ಮೂಲಕ ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದ
ವೇಗಿ ಆಲಿ ರಾಬಿನ್ಸನ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನೂ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಕ್ರಿಸ್ ವೋಕ್ಸ್ ಅವರನ್ನು ಈ ತಂಡದಲ್ಲಿ ಸೇರಿಸಲಾಗಿಲ್ಲ. ಇತ್ತೀಚೆಗೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಆರ್ಚರ್ ಚೇತರಿಕೆ ಕಂಡಿದ್ದರು ತಂಡಕ್ಕೆ ಮರಳಿಲ್ಲ. ಅದೇ ಸಮಯದಲ್ಲಿ, ವೋಕ್ಸ್ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲದೆ, ವಿಕೆಟ್‌ಕೀಪರ್ ಬೆನ್ ಫಾಕ್ಸ್ ಮತ್ತು ವೇಗದ ಬೌಲರ್ ಆಲಿ ಸ್ಟೋನ್ ಕೂಡ ಗಾಯದಿಂದಾಗಿ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್ ತಂಡ ಹೀಗಿದೆ ಜೋ ರೂಟ್(ನಾಯಕ), ಜೋಸ್ ಬಟ್ಲರ್, ಜ್ಯಾಕ್ ಲೀಚ್, ಆಲಿ ಪೋಪ್, ಜ್ಯಾಕ್ ಕ್ರೌಲಿ, ಜೇಮ್ಸ್ ಆಂಡರ್ಸನ್, ಡೊಮ್ ಬೆಸ್, ಸ್ಯಾಮ್ ಕರ್ರನ್, ಆಲಿ ರಾಬಿನ್ಸನ್, ಹಸೀಬ್ ಹಮೀದ್, ಡೊಮ್ ಸಿಬ್ಲಿ, ಡಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಮಾರ್ಕ್ ವುಡ್.

Exit mobile version