‘ಹರ್ ಘರ್ ತಿರಂಗ’; 10 ದಿನಗಳಲ್ಲಿ 1 ಕೋಟಿ ರಾಷ್ಟ್ರಧ್ವಜ ಮಾರಾಟ ಮಾಡಿದ ಅಂಚೆ ಇಲಾಖೆ!

India Post

ನವದೆಹಲಿ : ಹತ್ತು ದಿನಗಳಲ್ಲಿ ಭಾರತೀಯ ಅಂಚೆ ಇಲಾಖೆ(India Post Department) ದೇಶಾದ್ಯಂತ ಇರುವ ತನ್ನ 1.5 ಲಕ್ಷ ಅಂಚೆ ಕಚೇರಿಗಳು(Post Office) ಮತ್ತು ಆನ್ಲೈನ್(Online) ಮೂಲಕ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ.

1.5 ಲಕ್ಷ ಅಂಚೆ ಕಚೇರಿಗಳ ಜಾಲದೊಂದಿಗೆ ಅಂಚೆ ಇಲಾಖೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ‘ಹರ್ ಘರ್ ತಿರಂಗ’(Har Ghar Thiranga) ಕಾರ್ಯಕ್ರಮವನ್ನು ಕೊಂಡೊಯ್ದಿದೆ. 10 ದಿನಗಳ ಅಲ್ಪಾವಧಿಯಲ್ಲಿ, ಭಾರತ ಅಂಚೆ ಇಲಾಖೆ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡಿದೆ. ಈ ಧ್ವಜಗಳು, ಅಂಚೆ ಕಚೇರಿಗಳು ಮತ್ತು ಆನ್ಲೈನ್ ಮೂಲಕ ನಾಗರಿಕರಿಗೆ ತಲುಪಿವೆ.

ಇನ್ನು ಈ ಧ್ವಜಗಳನ್ನು ಅಂಚೆ ಇಲಾಖೆಯು 25 ರೂ. ದರದಲ್ಲಿ ಮಾರಾಟ ಮಾಡಿದೆ ಎಂದು ತಿಳಿಸಿದೆ. ಇಲಾಖೆಯು ದೇಶಾದ್ಯಂತ ಯಾವುದೇ ವಿಳಾಸಕ್ಕೆ ಉಚಿತವಾಗಿ ಮನೆ ಬಾಗಿಲಿಗೆ ಧ್ವಜಗಳನ್ನು ತಲುಪಿಸುತ್ತಿದೆ. ಇ-ಪೋಸ್ಟ್ ಆಫೀಸ್ ಸೌಲಭ್ಯದ ಮೂಲಕ 1.75 ಲಕ್ಷಕ್ಕೂ ಹೆಚ್ಚು ನಾಗರಿಕರು ಧ್ವಜಗಳನ್ನು ಆನ್ಲೈನ್ನಲ್ಲಿ ಖರೀದಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.

ನಾಗರಿಕರು ಹತ್ತಿರದ ಅಂಚೆ ಕಚೇರಿ ಅಥವಾ ಇ-ಪೋಸ್ಟ್ ಆಫೀಸ್(E-Post Office) ವೆಬ್ಸೈಟ್ಗೆ ಭೇಟಿ ನೀಡಿ, ರಾಷ್ಟ್ರಧ್ವಜವನ್ನು ಪಡೆದುಕೊಳ್ಳಬಹುದು ಮತ್ತು “ಹರ್ ಘರ್ ತಿರಂಗ” ಅಭಿಯಾನದ ಭಾಗವಾಗಬಹುದು. ನಾಗರಿಕರು ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು www.hargartiranga.com ನಲ್ಲಿ ಅಪ್ಲೋಡ್(Upload) ಮಾಡಿ, ನವ ಭಾರತದ ಅತಿದೊಡ್ಡ ಆಚರಣೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನೋಂದಾಯಿಸಿ ಎಂದು ಸಚಿವಾಲಯ ಮನವಿ ಮಾಡಿದೆ.

ಇನ್ನು ‘ಹರ್ ಘರ್ ತಿರಂಗ’ ಎಂಬುದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜನರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ(Central Government) ರೂಪಿಸಿರುವ ಅಭಿಯಾನವಾಗಿದೆ.

Exit mobile version