ಮಾಲಿನ್ಯ ನಿಯಂತ್ರಣದ ಸಲುವಾಗಿ, 50 ಸಾವಿರ ವಿದ್ಯುತ್ ಚಾಲಿತ ಬಸ್ ಗಳ ಖರೀದಿಗೆ ಮುಂದಾದ ಭಾರತ ಸರ್ಕಾರ

E Buses

ಎಲೆಕ್ಟ್ರಿಕ್ ಬಸ್(Electric Bus) ಮಾದರಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ(Central Government) ಅಧೀನ ಸಂಸ್ಥೆಯ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಬೃಹತ್ ಯೋಜನೆ ರೂಪಿಸಿದ್ದು, ವಿವಿಧ ರಾಜ್ಯಗಳಿಗಾಗಿ ಬರೋಬ್ಬರಿ 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಮುಂದಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆಯನ್ನು ಇಂಗಾಲರಹಿತಗೊಳಿಸುವುದು ಮತ್ತು ಹೊಗೆ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಪೂರೈಸಲು ಸಹಾಯವಾಗಲಿದೆ.


ಹೊಸ ಯೋಜನೆ ಅಡಿ ದೇಶಾದ್ಯಂತ ಪ್ರಮುಖ ರಾಜ್ಯಗಳು ನಗರ ಸಾರಿಗೆ ವಿಭಾಗದಲ್ಲಿ ಈ ಬಸ್‌ಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದ್ದು, 2030ರ ವೇಳೆಗೆ ಒಟ್ಟು 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು(ಇ-ಬಸ್‌ಗಳು) ನಿಯೋಜನೆಗೊಳಿಸಲು ಬೃಹತ್ ಯೋಜನೆಯನ್ನು ರೂಪಿಸುತ್ತಿದೆ. ದೇಶಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಕಡಿತಗೊಳಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬದಲಾಗಿ ಇ.ವಿ ಮಾದರಿಗಳನ್ನು ಹಂತ-ಹಂತವಾಗಿ ಅಳವಡಿಸಿಕೊಳ್ಳುತ್ತಿದ್ದು, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(CESL)

ಸಂಸ್ಥೆಯು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ (WRI ಇಂಡಿಯಾ) ಜೊತೆಗೂಡಿ ಇ.ವಿ ಬಸ್‌ಗಳನ್ನು ಅಳವಡಿಸುವ ಕುರಿತಾಗಿ ಮಹತ್ವದ ನಿರ್ಧಾರ ಪ್ರಕಟಿಸಿದೆ. “ದೇಶದಲ್ಲಿ ಇಂತಹ ಟೆಂಡರ್‌ಗಳು ಮೂಲಸೌಕರ್ಯ ಯೋಜನೆಗಳಂತೆ ಕಾಣಲಾರಂಭಿಸಿವೆ. ಎಲೆಕ್ಟ್ರಿಕ್ ಬಸ್‌ಗಳ ಸ್ಥಳೀಯ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿ ಬೆಳೆಯುವ ನಿರೀಕ್ಷೆಯಿದೆ” ಎಂದು ಸಿಇಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಮಹುವಾ ಆಚಾರ್ಯ ಹೇಳಿದ್ದಾರೆ. “ಈ ದೇಶವು ತನ್ನ ಎಲೆಕ್ಟ್ರಿಕ್ ವಾಹನಗಳ ಮಹತ್ವಾಕಾಂಕ್ಷೆಯ ಮೇಲೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.

ಆದ್ದರಿಂದ ಹಣಕಾಸು ಒದಗಿಸುವಿಕೆಯು ಒಂದು ಅವಕಾಶವನ್ನು ಪ್ರಸ್ತುತ ಪಡಿಸುವಷ್ಟು ಸವಾಲಾಗಿ ಉಳಿದಿದೆ,” ಎಂದು ಆಚಾರ್ಯ ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ 2020 ರಲ್ಲಿ ಮೊದಲ ಬಾರಿಗೆ ಸಿಇಎಸ್ಎಲ್ ಅನ್ನು ಅದರ ಪೋಷಕ ಸಂಸ್ಥೆಯಾಗಿರುವ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್‌ನ ಸೌರ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಲೀಸಿಂಗ್ ವ್ಯವಹಾರವನ್ನು ನಿರ್ವಹಿಸಲು ರಚಿಸಲಾಯಿತು. ಇದು ನಾಲ್ಕು ರಾಜ್ಯ-ಚಾಲಿತ ಇಂಧನ ಕಂಪನಿಗಳ ನಡುವಿನ ಉದ್ಯಮವಾಗಿದೆ.


ದೇಶದಲ್ಲಿ 2070ರ ವೇಳೆಗೆ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ಗುರಿಯ ಭಾಗವಾಗಿ 2030ರ ವೇಳೆಗೆ ಅದರ ಒಟ್ಟಾರೆ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್ ಗಳಷ್ಟು ಕಡಿತಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ರೂಪಿಸಿದ ಯೋಜನೆಯಲ್ಲಿ ಈ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ. CESL ಸಂಸ್ಥೆಯು ಭಾರತದ ಪ್ರಮುಖ 25 ರಾಜ್ಯಗಳಲ್ಲಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಯನ್ನು ಮಾಡುವ ಗುರಿಹೊಂದಿದ್ದು, ಇದಕ್ಕಾಗಿ ಸುಮಾರು ರೂ. 80 ಸಾವಿರ ಕೋಟಿ ವೆಚ್ಚ ತಗುಲುವುದಾಗಿ ಅಂದಾಜಿಸಲಾಗಿದೆ.

ಡೀಸೆಲ್ ಮತ್ತು ಸಿಎನ್‌ಜಿ ಬಸ್‌ಗಳಿಗಿಂತಲೂ ಕ್ರಮವಾಗಿ ಶೇಕಡಾ 27 ಮತ್ತು ಶೇಕಡಾ 23 ಅಗ್ಗವಾಗಿರುವ ಎಲೆಕ್ಟ್ರಿಕ್ ಬಸ್ ಮಾದರಿಗಳು ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲಿದ್ದು, ಹಂತ-ಹಂತವಾಗಿ ಇವಿ ಬಸ್‌ಗಳ ಅಳವಡಿಕೆಯನ್ನು ಹೆಚ್ಚಿಸುವುದರಿಂದ ಮಾಲಿನ್ಯ ಪ್ರಮಾಣವು ತಗ್ಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಗ್ರ್ಯಾಂಡ್ ಚಾಲೆಂಜ್ ಅಡಿಯಲ್ಲಿ, CESL ಸಂಸ್ಥೆಯು ಮೊದಲ ಹಂತವಾಗಿ ಐದು ಪ್ರಮುಖ ಮಹಾನಗರಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಸೂರತ್‌ನಲ್ಲಿ ಹೊಸ ಯೋಜನೆಯ ಮೊದಲ ಹಂತದ ಇ-ಬಸ್‌ಗಳು ರಸ್ತೆಗಿಳಿಯಲಿವೆ.


ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದೊಳಗಾಗಿ 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಬಳಕೆಯ ಇ.ವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಿದ್ದವಾಗುತ್ತಿವೆ. ಇದರಿಂದ ಸಾರ್ವಜನಿಕ ಬಳಕೆ ಇ.ವಿ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು CESL ಸಂಸ್ಥೆಯ ಮೊದಲ ಹಂತದಲ್ಲಿ ಕೆಲವೇ ದಿನಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಹಂತ-ಹಂತವಾಗಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ.

Exit mobile version