ಐಸಿಸಿ ಅಂಡರ್ 19 ವಿಶ್ವಕಪ್ : ಫೈನಲ್ ಪ್ರವೇಶಿಸಿದ ಭಾರತ!

under 19

ಆಂಟಿಗುವಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಭಾರತ 96 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಯಶ್ ದುಲ್ ನಾಯಕತ್ವದ ಭಾರತ ಅಂಡರ್-19 ತಂಡವು, ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸಿ ಸತತ ನಾಲ್ಕನೇ ಬಾರಿಗೆ ಮತ್ತು ಒಟ್ಟಾರೆ ಎಂಟನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದೆ. ನಾಯಕ ಯಶ್ ಶತಕ ಹಾಗೂ ಶೇಕ್ ರಶೀದ್ 94 ರನ್ಗಳ ಕೊಡುಗೆಯಿಂದ 290 ರನ್ ಕಲೆಹಾಕಿದ್ದ ಭಾರತ ಆಸ್ಟ್ರೇಲಿಯಾ 291 ರನ್ಗಳ ಗುರಿ ನೀಡಿತು. ಈ ಉತ್ತಮ ಮೊತ್ತವನ್ನ ಬೆನ್ನತ್ತಿದ ಕಾಂಗರೂ ಪಡೆ ಭಾರತದ ಸ್ಪಿನ್ನರ್ಸ್ ದಾಳಿಗೆ ನಲುಗಿ 190 ರನ್ಗಳಿಗೆ ಆಲೌಟ್ ಆಗುವ ಮೂಲಕ 96 ರನ್ಗಳ ಹೀನಾಯ ಸೋಲು ಕಂಡಿದೆ.

ಪರಿಣಾಮ ಭಾರತ ಜ್ಯೂನಿಯರ್ ತಂಡವು ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ತಂಡದ ಮೊತ್ತ 37 ರನ್ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡಿದ್ದರು. ಅಂಕ್ರಿಶ್ ರಘುವಂಶಿ 6 ರನ್ಗಳಿಸಿ ಔಟಾದರೆ, ಹರ್ನೂರ್ ಸಿಂಗ್ 16 ರನ್ಗಳ ಕೊಡುಗೆಯನ್ನು ನೀಡಿದರು. ಈ ವೇಳೆ ನಾಯಕ ಯಶ್ ಧುಲ್ ಮತ್ತು ಶೇಕ್ ರಶೀದ್ ಭಾರತ ತಂಡವನ್ನ ಸುಭದ್ರ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾದ್ರು. ನಾಯಕನ ಜವಾಬ್ದಾರಿಯುತ ಆಟವಾಡಿದ ಯಶ್ ಧುಲ್ 110 ಎಸೆತಗಳಲ್ಲಿ 110 ರನ್ ಕಲೆಹಾಕುವ ಮೂಲಕ ಭರ್ಜರಿ ಶತಕ ಸಿಡಿಸಿದ್ರು. ಇವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.

ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ಶೇಕ್ ರಶೀದ್ 108 ಎಸೆತಗಳಲ್ಲಿ 94ರನ್ ಕಲೆಹಾಕಿ ಶತಕ ವಂಚಿತರಾದರು. ಇವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಭಾರತ ನೀಡಿದ 291 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಎರಡನೇ ಓವರ್ನಲ್ಲೇ ಓಪನರ್ ಟೀಗ್ ವಿಲ್ಲಿ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್ಗೆ ಕ್ಯಾಂಪ್ಬೆಲ್ ಮತ್ತು ಕೋರಿ ಮಿಲ್ಲರ್ ಅರ್ಧ ಶತಕದ ಜೊತೆಯಾಟವಾಡಿದರು. ಈ ವೇಳೆಯಲ್ಲಿ ಎಡಗೈ ಸ್ಪಿನ್ನರ್ ರಘುವಂಶಿ ಈ ಜೋಡಿಯನ್ನ ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು. ಇದ್ರ ಬೆನ್ನಲ್ಲೇ ಕ್ಯಾಂಪ್ಬೆಲ್ ಸ್ಪಿನ್ನರ್ ವಿಕ್ಕಿ ಓಸ್ವಾಲ್ಗೆ ವಿಕೆಟ್ ಒಪ್ಪಿಸಿದ್ರು.

ನಾಯಕ ಕ್ಯಾಂಪ್ಬೆಲ್ ಕೇವಲ 3ರನ್ಗೆ ಇನ್ನಿಂಗ್ಸ್ ಮುಗಿಸಿದ್ರೆ, ನಿವೇಥನ್ ರಾಧಾಕೃಷ್ಣನ್ ಕೂಡ ನಿಶಾಂತ್ ಸಿಂಧುಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಸತತ ಎರಡು ವಿಕೆಟ್ ಪಡೆಯುವಲ್ಲಿ ವಿಕ್ಕಿ ಓಸ್ವಾಲ್ ಯಶಸ್ವಿಯಾದ್ರು. ಭಾರತದ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ 41.5 ಓವರ್ಗಳಲ್ಲಿ 194 ರನ್ಗಳಿಗೆ ಪತನಗೊಂಡಿತು. 5ನೇ ಬಾರಿ ಪ್ರಶಸ್ತಿ ಸನಿಹದತ್ತ ಭಾರತ. ಐಸಿಸಿ ಅಂಡರ್ 19ರ ವಯೋಮಿತಿಯಲ್ಲಿ ಭಾರತಕ್ಕೆ 5ನೇ ಬಾರಿ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಭಾರತ ಇದುವರೆಗೆ 4 ಬಾರಿ ಪ್ರಶಸ್ತಿ ಗೆದ್ದಿದೆ. ಭಾರತ 2000, 2008, 2012, 2018ರಲ್ಲಿ ಪ್ರಶಸ್ತಿ ಗೆದ್ದಿತ್ತು. ಆಸ್ಟ್ರೇಲಿಯಾ ಇದುವರೆಗೆ 3 ಬಾರಿ ಅಂಡರ್-19 ವರ್ಲ್ಡ್ ಕಪ್ ಗೆದ್ದುಕೊಂಡಿದೆ.

Exit mobile version