ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ!

dollor

ರಷ್ಯಾ-ಉಕ್ರೇನ್ ಯುದ್ದದ ಪರಿಣಾಮದಿಂದ ರೂಪಾಯಿಯ ಮೌಲ್ಯ ಸಾರ್ವಕಾಲಿಕ ಕುಸಿತ ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಇನ್ನು ಪ್ರಸಕ್ತ ವರ್ಷವೇ ಅಮೇರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 80-82 ರೂಪಾಯಿಗಳವರೆಗೆ ಕುಸಿತ ಕಾಣುವ ಸಾಧ್ಯತೆಯಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಪೂರಕವಾಗಿವೆ ಎಂದು ಸಿಆರ್ ಫಾರೆಕ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಹೇಳಿದ್ದಾರೆ.

ಇನ್ನು ರಷ್ಯಾ-ಉಕ್ರೇನ್ ಯುದ್ದದ ಕಾರಣದಿಂದ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲಬೆಲೆ ಗಣನೀಯವಾಗಿ ಏರಿಕೆ ಕಾಣುವ ಸಾದ್ಯತೆಯಿದ್ದು, ತೈಲಬೆಲೆ ಏರಿಕೆಯಾದಷ್ಟು, ಭಾರತದ ಆಮದು ಪ್ರಮಾಣ ಏರಿಕೆಯಾಗಿ ರೂಪಾಯಿಯೂ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಸದ್ಯ ಹೆಚ್ಚುತ್ತಿರುವ ರಾಜಕೀಯ ಅಪಾಯಗಳು ಮತ್ತು ಆಮದು ಪ್ರಮಾಣದಿಂದ ರೂಪಾಯಿ ಕುಸಿತ ಕಾಣುತ್ತಿದ್ದು, ಕೇಂದ್ರಬ್ಯಾಂಕ್ ಮಧ್ಯಪ್ರವೇಶ ಮಾಡಿ ಕೆಲವು ಬಿಗಿ ಆರ್ಥಿಕ ಕ್ರಮಗಳನ್ನು ಜಾರಿಗೊಳಿಸಬಹುದು. ಸೆನ್ಸೆಕ್ಸ್-ನಿಪ್ಟಿ ಕುಸಿತ : ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 2.74 ಇಳಿಕೆ ಕಂಡು 54,842.74ಗೆ ತಲುಪಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡಾ ಶೇಕಡಾ 2.35 ಇಳಿಕೆ ಕಂಡು 15,863.15 ತಲುಪಿದೆ. ಷೇರು ಮಾರುಕಟ್ಟೆಯ ಕುಸಿತಕ್ಕೆ ತೈಲಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತವೇ ಕಾರಣವಾಗಿದೆ.
ಇನ್ನು ಸುದಿರ್ಘ ರಷ್ಯಾ-ಉಕ್ರೇನ್ ಯುದ್ದದಿಂದ ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ರಷ್ಯಾದ ಮೇಲೆ ಅಮೇರಿಕಾ ಮತ್ತು ಐರೋಪ್ಯ ಒಕ್ಕೂಟ ವಿಧಿಸಿರುವ ಆರ್ಥಿಕ ದಿಗ್ಬಂದನ ಪ್ರಪಂಚದಲ್ಲಿ ತೈಲ ಮತ್ತು ಅನಿಲ ಬೆಲೆಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಸ್ವಿಪ್ಟ್ ( ಅಂತರಾಷ್ಟ್ರೀಯ ಹಣಕಾಸು ವರ್ಗಾವಣೆ ಜಾಲ)ದಿಂದ ರಷ್ಯಾವನ್ನು ಹೊರಗಿಡಲಾಗಿದ್ದು, ಈ ಕ್ರಮದಿಂದ ರಷ್ಯಾದೊಂದಿಗೆ ವ್ಯವಹಾರ ನಡೆಸಲು ಡಾಲರ್ ಬದಲಾಗಿ ಸ್ಥಳೀಯ ಕರೆನ್ಸಿಯಲ್ಲಿಯೇ ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಭಾರತೀಯ ರಿಸರ್ವ ಬ್ಯಾಂಕ್ ಒಟ್ಟು 631 ಬಿಲಿಯನ್ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಹೊಂದಿದೆ. ಆಮದು ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮೀಸಲು ನಿಧಿಯನ್ನು ಬಳಸುವ ಚಿಂತನೆ ನಡೆಸಿದೆ.

ವಿದೇಶಿ ಆಮದು ಮೌಲ್ಯ ಹೆಚ್ಚಿದಷ್ಟು ಭಾರತದಲ್ಲಿ ಹಣದುಬ್ಬರದ ಪ್ರಮಾಣವೂ ಏರಿಕೆ ಕಾಣಲಿದೆ. ಹಣದುಬ್ಬರ ಪ್ರಮಾಣ ಹೆಚ್ಚಾದಷ್ಟು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರ ಪರಿಣಾಮ ಸಾಮಾನ್ಯ ಜನರ ಮೇಲಾಗಲಿದೆ.

Exit mobile version