ಮಣ್ಣು ಎಂಬ `ವಿಸ್ಮಯ’ ; ಮಣ್ಣಿನ ಈ ಬಹುಮುಖ್ಯ ಅಂಶಗಳನ್ನು ನೀವು ತಿಳಿಯಲೇಬೇಕು!

soil

‘ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂದು ದಾಸವಾಣಿ ಹೇಳುತ್ತದೆ. ನಂಬಿ ನಡೆದರೆ ಬದುಕು ಕಟ್ಟಿಕೊಳ್ಳುವ ಕೆಲಸ ಕಷ್ಟದ್ದಲ್ಲ ಎನ್ನುವುದು ರೈತವಾಣಿ. ಆದರೆ ಮಣ್ಣಿನ ಸತ್ವ ಮೊದಲಿನಂತಿಲ್ಲ. ಕಳೆದ ಎರಡು ಶತಮಾನಗಳಲ್ಲಿ ಮಣ್ಣಿನ ಸ್ವರೂಪ ಬದಲಾಗಿದೆ. ರೈತರ ಕೈ ಹಿಡಿದು ಕೋಟ್ಯಂತರ ಜನರ ತುತ್ತಿನ ಚೀಲ ತುಂಬಿಸುತ್ತಿದ್ದ ಮಣ್ಣಿನ ಕೆಲಸ ಮೊದಲಿನಷ್ಟು ಸಲೀಸಾಗಿ ನಡೆಯುತ್ತಿಲ್ಲ. ಮಣ್ಣಿನ ಉತ್ಪಾದನಾ ಸಾಮರ್ಥ್ಯವನ್ನು ಉನ್ನತ ಮಟ್ಟದಲ್ಲಿಟ್ಟುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಅದನ್ನು ಮುಂದಿನ ಪೀಳಿಗೆಗೆ ವಹಿಸಿಕೊಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.

ಮಣ್ಣು ಕೇವಲ ಭೌತಿಕ ವಸ್ತುವಾಗಿರದೆ ಭಾವನಾತ್ಮಕವಾಗಿಯೂ ನಮ್ಮನ್ನು ಆವರಿಸಿದೆ. ಪ್ರಾದೇಶಿಕತೆ, ರಾಷ್ಟ್ರೀಯತೆಯ ಪ್ರಶ್ನೆ ಬಂದಾಗಲೆಲ್ಲ ಮಣ್ಣಿನ ಋಣ ತೀರಿಸುವ ಮಾತನಾಡುತ್ತೇವೆ. ಆದರೆ ಮಣ್ಣಿಗೂ ಜೀವವಿದೆ ಎಂದು ಗ್ರಹಿಸುವುದಿಲ್ಲ. ನಿನ್ನ ತಲೆಯಲ್ಲೇನು ಮಣ್ಣು ತುಂಬಿದೆಯಾ? ನಿನಗೇನು ಬರುತ್ತೆ ಮಣ್ಣು ಎಂಬ ಮಾತಿನ ಧಾಟಿಯನ್ನು ಗಮನಿಸಿದರೆ ಸಾಕು, ನಾವು ಮಣ್ಣಿಗೆ ಕೊಟ್ಟಿರುವ ಸ್ಥಾನ ಥಟ್ಟನೆ ಅರಿವಾಗುತ್ತದೆ!

‘ಮಣ್ಣಿಂದ ಕಾಯ ಮಣ್ಣಿಂದ ಮಾಯ, ಮಣ್ಣಿಂದ ಸಕಲ ವಸ್ತುಗಳೆಲ್ಲ… ಮಣ್ಣು ಬಿಟ್ಟವರಿಗೆ ಆಧಾರವಿಲ್ಲ’ ಎಂಬ ಸಾಲುಗಳು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಗಾಯನದಲ್ಲಿ ಸುಪ್ರಸಿದ್ಧಗೊಂಡಿವೆ. ಮಣ್ಣಿನ ಮಹತ್ವವನ್ನು ಸಾಧಕರು ಶತ ಶತಮಾನಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. ಮಣ್ಣಿನಲ್ಲೇ ಮನುಷ್ಯ ಬದುಕಿನ ಸರ್ವಸ್ವವೂ ಇದೆ. ಅಂತಹ ಮಣ್ಣು ಮಾತ್ರ ಮನುಷ್ಯನ ದುರಾಸೆಗೆ ಬಲಿಯಾಗುತ್ತಲೇ ಇದೆ. ಮಣ್ಣನ್ನು ಸಂರಕ್ಷಿಸುವ ಸಲುವಾಗಿ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಇವುಗಳಲ್ಲಿ ಪ್ರಾಮುಖ್ಯವಾಗಿರುವುದು ಡಿಸೆಂಬರ್ `5ರ ‘ವಿಶ್ವ ಮಣ್ಣು ದಿನಾಚರಣೆ’.

ಆಚರಣೆಗಳು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಿರಬಾರದು. ಭೂಮಿಯಲ್ಲಿನ ಮಣ್ಣು ಫಲವತ್ತತೆ ಕಳೆದುಕೊಂಡರೆ ಬೆಳೆ ಬೆಳೆಯಲು ಸಾಧ್ಯವೇ? ನಮಗೆ ಆಹಾರ ಸಿಗುವುದು ಸಾಧ್ಯವೇ? ಆ ಪರಿಸ್ಥಿತಿಯನ್ನು ಊಹಿಸಲೂ ನಮಗೆ ಧೈರ್ಯ ಸಾಲುವುದಿಲ್ಲ. ಭೂತಾಯಿ ಬಂಜೆಯಾದರೆ ಮಾನವ ಕುಲವೇ ಸರ್ವನಾಶ. ಅತಿಯಾದ ಕೈಗಾರಿಕೆಗಳು, ರಾಸಾಯನಿಕ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಇವೆಲ್ಲವೂ ಭೂತಾಯಿಗೆ ಮಾರಕ, ಮಾನವ ಕುಲಕ್ಕೇ ಮಾರಕ.

ಮಾನವ ಈಗಲಾದರೂ ಎಚ್ಚೆತ್ತು, ದುರಾಸೆಯನ್ನು ಬಿಟ್ಟು, ಮಣ್ಣನ್ನು ತನ್ನ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸುವುದು ಬಿಟ್ಟು  ವೈಜ್ಞಾನಿಕವಾಗಿ ಬಳಕೆ ಮಾಡುವುದನ್ನು ಅರಿತು ಪಾಲಿಸು, ಮಣ್ಣು ಹೊನ್ನಾಗಿ ಭೂತಾಯಿ ನಮಗೆ ಜೀವಧಾನ ಮಾಡುತ್ತಾಳೆ, ಇಲ್ಲದೆ ಹೋದರೆ ನಮ್ಮ ನಾಶಕ್ಕೆ ನಾವೇ ಮುನ್ನುಡಿ ಬರೆದಂತೆ, ಎಚ್ಚರ!

Exit mobile version