ಜನರ ಜೀವಕ್ಕೆ ಕುತ್ತಾದ ಆನ್ ಲೈನ್ ಲೋನ್ ಆಪ್ ಗಳಿಗೆ ಬುದ್ದಿ ಕಲಿಸದ ಬೆಂಗಳೂರು ಪೊಲೀಸ್!

online

ಕರೋನಾ ಸಂಕಷ್ಟಕ್ಕೆ ಸಿಲುಕಿ ಆನ್‌ಲೈನ್ ಲೋನ್ ಆಪ್‌ಗಳಿಂದ ಲಕ್ಷಾಂತರ ಜನ ಸಾಲ ಪಡೆದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಲೋನ್ ಆಪ್ ಗಳು ಸಾವಿರಾರು ಕೋಟಿ ಸಾಲವನ್ನು ನೀಡಿ ಅಕ್ರಮ ಬಡ್ಡಿ ಸುಲಿಗೆಗೆ ನಿಂತಿವೆ. ಸಾಲ ವಸೂಲಿ ಹೆಸರಲ್ಲಿ ಮರ್ಯಾದೆ ತೆಗೆದು ಜನರ ಜೀವ ತೆಗೆದ ಆಪ್‌ಗಳ ಆಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸರು ಮೌನ ವಹಿಸಿದ್ದಾರೆ.

ಆನ್‌ಲೈನ್ ಲೋನ್ ಆಪ್‌ಗಳು ಮೊಬೈಲ್ ಸಂಪರ್ಕ ಸಂಖ್ಯೆ ಆಧರಿಸಿ ಲೋನ್ ಕೊಡಲು ಶುರು ಮಾಡಿವೆ. ಒಬ್ಬರಿಂದ ಇನ್ನೊಬ್ಬರಿಗೆ ವಿಷಯ ಹಬ್ಬಿಸಿ ಆನ್‌ಲೈನ್ ಆಪ್‌ಗಳಿಂದ ಸಾಲ ಪಡೆದವರು. ಒಂದು ಸಾಲ ತೀರಿಸಲು ಇನ್ನೊಂದು ಆಪ್‌ ನಿಂದ ಸಾಲ ಪಡೆದವರು. ಹೀಗೆ ಶುರುವಾದ ಸಾಲಗಳನ್ನು ಕಟ್ಟಲಾಗದೇ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಹರಾಜು ಮಾಡಿಕೊಂಡವರು ಅನೇಕರು. ಮರ್ಯಾದೆಗೆ ಅಂಜಿ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಶೇ. 30 ರಿಂದ ಶೇ. 60 ರಷ್ಟು ಬಡ್ಡಿ ವಿಧಿಸಿ ಸುಲಿಗೆ ಮಾಡುತ್ತಿದ್ದ ಆಪ್‌ಗಳ ಕಾರ್ಯಕ್ಕೆ ಸಾಲ ಪಡೆದವರು ಬೆಚ್ಚಿ ಬಿದ್ದಿದ್ದಾರೆ.

ನಮ್ಮ ಮಾಹಿತಿ ಪ್ರಕಾರ ಗೂಗಲ್ ಪ್ಲೇ ಸ್ಟೋರ್ ಒಂದರಲ್ಲೇ ಇಂತ 500 ಆಪ್ ಗಳಿವೆ. ಆನ್‌ಲೈನ್ ಸಾಲ ಪಡೆದವರು ಬಡ್ಡಿ ಅಲ್ಲ ಅಸಲು ಕೂಡ ಕಟ್ಟುವ ಅಗತ್ಯವೇ ಇಲ್ಲ. ಕಾನೂನು ಪ್ರಕಾರ, ಆನ್‌ಲೈನ್ ಲೋನ್‌ ಆಪ್‌ಗಳು ಆರ್‌ಬಿಐನಲ್ಲಿ ನೋಂದಣಿ ಮಾಡಿಲ್ಲ. ಕನಿಷ್ಠ ಪಕ್ಷ ಆಯಾ ರಾಜ್ಯದ ಸಹಕಾರ ಇಲಾಖೆಯಲ್ಲಿ ನೊಂದಣಿ ಮಾಡದೇ ಸಾಲ ಕೊಟ್ಟಿರುವುದು ಅಕ್ರಮ. ಮಾತ್ರವಲ್ಲ ಗ್ರಾಹಕರ ಮೊಬೈಲ್ ಮಾಹಿತಿ ಕದ್ದು ಮರ್ಯಾದೆ ತೆಗೆದು ಐಟಿ ಕಾಯ್ದೆ ಉಲ್ಲಂಘನೆ ಮಾಡಿದ ಅಪರಾಧ ಆಗುತ್ತದೆ. ಹೀಗಾಗಿ ಇವುಗಳಿಂದ ಪಡೆದ ಸಾಲ ಸದ್ಯಕ್ಕೆ ಕಟ್ಟುವ ಅಗತ್ಯವೇ ಇಲ್ಲ. ಇನ್ನು ಎಪಿಕೆ ಲಿಂಕ್ ಮೂಲಕವೇ ಅತಿ ಹೆಚ್ಚು ಆಪ್ ಗಳನ್ನು ಸಾರ್ವಜನಿಕರು ಲೋನ್ ಪಡೆದುಕೊಂಡಿದ್ದಾರೆ. ಆದರೆ ಈ ಎಪಿಕೆ ಲಿಂಕ್ ಆಪ್‌ಗಳ ವಿರುದ್ಧ ಸಹ ಪೊಲೀಸರು ಕ್ರಮ ಕೈಗೊಳ್ಳಬೇಕು. ಎಪಿಕೆ ಆಪ್‌ಗಳಿಂದ ಸಾಲ ಪಡೆದಿದ್ದರೂ ಕಟ್ಟುವ ಪ್ರಮೇಯವೇ ಬರುವುದಿಲ್ಲ. ಈಗಾಗಲೇ ಆನ್‌ಲೈನ್ ಲೋನ್‌ ಆಪ್‌ಗಳ ಬೇನಾಮಿ ವಹಿವಾಟು ಬಗ್ಗೆ ಇಡಿ ಅಧಿಕಾರಿಗಳು ಕೂಡ ತನಿಖೆ ನಡೆಸಬೇಕಿದೆ. ಆನ್‌ಲೈನ್ ಲೋನ್ ಆಪ್‌ಗಳ ಸಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ.

ಸಾಲ ಕಟ್ಟದವರ ವಿರುದ್ಧ ಕೋರ್ಟ್‌ ಮೊರೆ ?

ಇನ್ನು ಸಾಮಾನ್ಯವಾಗಿ ಆನ್‌ಲೈನ್ ಲೋನ್‌ ಆಪ್‌ಗಳಿಂದ ಪಡೆದ ಸಾಲ ತೀರಿಸದಿದ್ದರೆ ಪೊಲೀಸರಿಗೆ ದೂರು ಕೊಡುತ್ತಾರೆ. ಇಲ್ಲವೇ ಕೋರ್ಟ್ ನಲ್ಲಿ ಕೇಸು ದಾಖಲಿಸುತ್ತಾರೆ ಎಂಬ ಭೀತಿ ಹುಟ್ಟಿರಬಹುದು. ಕಾನೂನು ಪ್ರಕಾರ ಆನ್‌ಲೈನ್ ಲೋನ್‌ ಆಪ್‌ಗಳು ಗ್ರಾಹಕರ ವಿರುದ್ಧ ಪೊಲೀಸರಿಗೆ ದೂರು ನೀಡಲು ಅವಕಾಶವಿಲ್ಲ ಹಾಗೂ ಕೋರ್ಟ್‌ ಮೊರೆ ಹೋಗಿ ಕೇಸು ದಾಖಲಿಸಲು ಸಾಧ್ಯವಿಲ್ಲ. ಯಾಕೆಂದರೆ ಅವು ಯಾವೂವು ಭಾರತೀಯ ಕಾನೂನುಗಳ ಅಡಿಯಲ್ಲಿ ನೋಂದಣಿ ಮಾಡಲ್ಪಟ್ಟಿಲ್ಲ. ( ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆನ್‌ಲೈನ್ ಲೋನ್ ಆಪ್‌ಗಳಿಗೆ ಇದು ಅನ್ವಯಿಸಲ್ಲ) ಹೀಗಾಗಿ ಇವು ಯಾವುದೇ ಕಾರಣಕ್ಕೂ ಗ್ರಾಹಕರ ಮೇಲೆ ಕೇಸು ದಾಖಲಿಸಿ ಹಣ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.

ವಂಚನೆ ಆರೋಪ ಎದುರಿಸುತ್ತಿರುವ ಆನ್‌ಲೈನ್ ಲೋನ್ ಆಪ್‌ಗಳು ಏನಂತ ನ್ಯಾಯಾಲಯಕ್ಕೆ ಹೋಗಲಿಕ್ಕೆ ಸಾಧ್ಯ ? ದೇಶದ ಕಾನೂನು ವ್ಯವಸ್ಥೆ ಪ್ರಕಾರ ನೋಡಿದರೆ ಸಾಲ ನೀಡುವ ಅಗತ್ಯವಿಲ್ಲ. ಸಾಲಕ್ಕಿಂತಲೂ ಎರಡು ಪಟ್ಟು ಸಾಲ ವಸೂಲಿ ಮಾಡುತ್ತಿರುವುದು ಮಹಾ ಅಪರಾಧ. ಆನ್‌ಲೈನ್ ಲೋನ್‌ ಆಪ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶನದಡಿ ಸ್ಥಾಪಿತವಾಗಿದ್ದರೆ ಮಾತ್ರ ಅವುಗಳಿಗೆ ಕಾನೂನಿನ ಮಾನ್ಯತೆ ಇರುತ್ತವೆ. ಆದರೆ, ನೋಂದಣಿ ಮಾಡದೇ ಅಕ್ರಮ ಆಪ್‌ಗಳು ಮಾಡಿರುವ ಅಪರಾಧಗಳ ಮುಂದೆ ಇದ್ಯಾವುದು ಅಲ್ಲ. ಹೀಗಾಗಿ ಅಕ್ರಮ ಆಪ್‌ಗಳು ಕಾನೂನು ಬಾಹಿರವಾಗಿ ಏನೇ ಒಪ್ಪಂದ ಮಾಡಿಕೊಂಡರೂ ಅವುಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ.

ಸಿಬಿಲ್ ಸ್ಕೋರ್ ಡೌನ್ ಆಗುತ್ತದೆ ಮಹಾ ಸುಳ್ಳು :

ಇನ್ನು ಆನ್‌ಲೈನ್‌ ಲೋನ್ ಆಪ್‌ಗಳಿಂದ ಪಡೆದ ಸಾಲ ತೀರಿಸದಿದ್ದರೆ, ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ ಎಂದು ಧಮ್ಕಿ ಹಾಕಿರಬಹುದು. ಆದರೆ ವಾಸ್ತವದಲ್ಲಿ ಸಿಬಿಲ್ ಸ್ಕೋರ್‌ ಗೂ ಆನ್‌ಲೈನ್ ಲೋನ್‌ ಆಫ್‌ಗಳ ಸಾಲಕ್ಕೂ ಸಂಬಂಧವೇ ಇಲ್ಲ. ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆನ್‌ಲೈನ್ ಆಪ್‌ಗಳಿಂದ ಸಾಲ ಪಡೆದು ಪಾವತಿಸದಿದ್ದರೆ ಅಂತಹವರಿಗೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಆದರೆ, ಈ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿರುವ, ಆನ್‌ಲೈನ್ ಲೋನ್‌ ಆಪ್‌ಗಳಿಂದ ಸಾಲ ಪಡೆದರೆ ಸಿಬಿಲ್ ಸ್ಕೋರ್ ಏನೂ ಆಗಲ್ಲ. ಈ ಅಕ್ರಮ ಆಪ್‌ಗಳ ವಿರುದ್ಧ ಮೊದಲು ಆರ್‌ಬಿಐ ಕ್ರಮ ಜರುಗಿಸಬೇಕಿದೆ. ಕಾನೂನು ಬಾಹಿರ ಆಪ್‌ಗಳಿಂದ ಸಾಲ ಪಡೆದು ಪಾವತಿಸದಿದ್ದರೆ ಯಾವ ಸಿಬಿಲ್ ಸ್ಕೋರ್ ಕಡಿಮೆಯಾಗಲ್ಲ

ಮಾಹಿತಿ ಸೋರಿಕೆ ಎಚ್ಚರವಿರಲಿ :

ಸಾಲ ಕೊಟ್ಟ ಆಪ್‌ಗಳು ತನ್ನ ಗ್ರಾಹಕರ ಎಲ್ಲಾ ಸಂಪರ್ಕ ಸಮೇತ ಎಲ್ಲಾ ಮಾಹಿತಿ ಕದ್ದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಎಪಿಕೆ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಂಡಿರುವ ಆಪ್‌ಗಳು ಮೊಬೈಲ್‌ ನಲ್ಲಿ ಸ್ಪೈಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸಾಲ ಮರು ಪಾವತಿ ಮಾಡದ ಗ್ರಾಹಕರ ಮಾಹಿತಿ ಸೋರಿಕೆಯಾಗುವ ಅಪಾಯ ವಿರುತ್ತದೆ. ಆಗಿರುವ ಪ್ರಮಾದ ಬಗ್ಗೆ ಸಾಲಗಾರರು ತಮ್ಮ ಸಂಬಂಧಿ ಸ್ನೇಹಿತರಿಗೆ ಮೊದಲೇ ಹೇಳಿಕೊಳ್ಳುವುದು ಸೂಕ್ತ. ಇನ್ನು ಎಪಿಕೆ ಲಿಂಕ್ ಮೂಲಕ ಆಪ್‌ ಡೌನ್‌ ಲೋಡ್ ಮಾಡಿಕೊಂಡಿದ್ದರೆ, ಅಂತವರು ಹೆಚ್ಚು ಜಾಗರೂಕರಾಗಬೇಕಾಗುತ್ತದೆ. ಯಾಕೆಂದರೆ ನಿಮ್ಮ ಮೊಬೈಲ್ ಎಲ್ಲಾ ಮಾಹಿತಿ, ಬ್ಯಾಂಕ್ ಖಾತೆ, ಪಾಸ್ ವರ್ಡ್, ಒಟಿಪಿ ಎಲ್ಲವೂ ಅವರ ಕೈಯಲ್ಲಿರುತ್ತದೆ. ಈ ಬಗ್ಗೆ ಜಾಗರೂಕತೆ ವಹಿಸುವುದು ಸೂಕ್ತ!

Exit mobile version