ಈ ಜೀವಿಗೆ ಹೃದಯವಿಲ್ಲ ; ಜೀವ ಜಗತ್ತಿನ ಅಚ್ಚರಿಯ ಪ್ರಭೇದ ಈ `ಎರೆಹುಳ’

Soil

ರೈತನ ಮಿತ್ರ(Farmer Friend), ಪ್ರಾಕೃತಿಕ ನೇಗಿಲ ಯೋಗಿ ಎಂದೆಲ್ಲಾ ಕರೆಸಿಕೊಳ್ಳುವ ಎರೆಹುಳುಗಳು(Earthworm)ಜಗತ್ತಿನ ಕೌತುಕದ ಕೇಂದ್ರಗಳು. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ಮಳೆಗಾಲದಲ್ಲಿ ನಮ್ಮ ಮನೆಯಂಗಳದಲ್ಲೇ ಬಿದ್ದು ಹೊರಳಾಡುತ್ತಾ, ಪಕ್ಷಿಗಳಿಗೆ ಆಹಾರವಾಗುವ, ಮೀನು(Fish) ಹಿಡಿಯುವ ಗಾಳಕ್ಕೆ ಮಿಕವಾಗುವ ಎರೆಹುಳುಗಳ ಬಗ್ಗೆ ಒಂದು ವಿಧದ ಅಸಹ್ಯದ ಭಾವನೆಯನ್ನು ಹೊಂದಿರುತ್ತೇವೆ. ಹಿಂದೆ ಮತ್ತು ಮುಂದೆ ಎರಡೂ ಕಡೆಗಳಲ್ಲಿ ಅನಿಯಂತ್ರಿತವಾಗಿ ಚಲಿಸಬಲ್ಲ ಈ ಎರೆಹುಳ ಜೀವಜಗತ್ತಿನ ವಿಸ್ಮಯಗಳಲ್ಲಿ ಹೌದು.

ಅಂದಹಾಗೆ ಈ ಮಣ್ಣು ಮಿತ್ರ ತನ್ನ ಒಡಲ್ಲಲ್ಲಿ ಎರಡು ಕೌತುಕದ ವಿಚಾರಗಳನ್ನಿಟ್ಟುಕೊಂಡಿದೆ. ಅದರಲ್ಲಿ ಮೊದಲನೆಯದ್ದು, ಎರೆಹುಳು ಹೃದಯವಿಲ್ಲದ ಜೀವಿ! ಹೌದು, ಎರೆಹುಳುವಿನಲ್ಲಿ ಹೃದಯ ರಹಿತ ರಕ್ತ ಪರಿಚಲನೆ ವ್ಯವಸ್ಥೆಯಿದೆ ಎಂಬುದೊಂದು ಅಚ್ಚರಿಯೇ ಸರಿ. ನಮ್ಮಂತೆಯೇ ಎರೆಹುಳುವಿನ ರಕ್ತವೂ ಕೆಂಪಗಿರುತ್ತದೆ, ಇದು ನಾಳಗಳಲ್ಲಿಯೇ ಹರಿಯುತ್ತದೆ. ರಕ್ತವನ್ನು ಶೇಖರಿಸಲು ಮತ್ತು ವಿತರಣೆ ಮಾಡಲು ಇವಕ್ಕೆ ಪ್ರತ್ಯೇಕ ರಕ್ತನಾಳಗಳಿವೆ. ಹಾಗೇ ಎರೆಹುಳು ತನ್ನ ಚರ್ಮದಿಂದಲೇ ಉಸಿರಾಡುವ ಕಾರಣ ಇದರ ಚರ್ಮ ಸದಾ ತೇವವಾಗಿರುತ್ತದೆ.

ರಕ್ತನಾಳಗಳ ಮೂಲಕ ರಕ್ತ ಚರ್ಮವನ್ನ ಪ್ರವಹಿಸುವ ವೇಳೆ ಗಾಳಿ ತೇವವಾದ ಚರ್ಮಕ್ಕೆ ಬಡಿದಾಗ ರಕ್ತನಾಳಗಳಲ್ಲಿರುವ ರಕ್ತ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುತ್ತದೆ. ಹೀಗೆ ಪ್ರತಿಖಂಡದಲ್ಲೂ ನಾಳದಂತಿರುವ ನೆಫ್ರೀಡಿಯಗಳೆಂಬ ಶುದ್ಧೀಕರಣದ ಅಂಗಗಳಿರುತ್ತವೆ. ಇವು ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ನೆಫ್ರೀಡಿಯ ರಂಧ್ರಗಳ ಮೂಲಕ ಹೊರಹಾಕುತ್ತವೆ. ಹೃದಯದ ಕೆಲಸವೂ ಇಲ್ಲೇ ಆಗುವುದರಿಂದ ಎರೆಹುಳುಗಳಿಗೆ ಹೃದಯದ ಅವಶ್ಯಕತೆಯೇ ಇರುವುದಿಲ್ಲ.
ಇನ್ನೊಂದು ಕೌತುಕ ಎಂದರೆ ಈ ಎರೆಹುಳುಗಳು ದ್ವಿಲಿಂಗಿಗಳು.

ಅಂದರೆ ಇವುಗಳ ದೇಹದಲ್ಲಿ ಸ್ತ್ರೀ ಮತ್ತು ಪುರುಷ ಎರಡೂ ಜನನೇಂದ್ರಿಯಗಳಿವೆ. ಇವೆರಡನ್ನೂ ಹೊಂದಿರುವ ಹೃದಯವಿಲ್ಲದ ಜೀವಿ ಎರೆಹುಳ ಮಾತ್ರ. ಎರೆಹುಳುವಿನ ಫೆರಿಟೀಮ ಭಾಗವನ್ನು ಹೊಂದಿರುವ ಹತ್ತು ಮತ್ತು ಹನ್ನೊಂದನೇ ಖಂಡದಲ್ಲಿ ಪುರುಷ ಜನನೇಂದ್ರಿಯಗಳಾದ ವೃಷಣಗಳು ಅಂಟಿಕೊಂಡಿರುತ್ತವೆ. ಅದೇ ರೀತಿ ಒಂದು ಜೊತೆ ಸ್ತ್ರೀ ಜನನೇಂದ್ರಿಯಗಳಾದ ಅಂಡಾಶಯಗಳು 13ನೇ ಖಂಡದ ಮೇಲುಹೊದಿಕೆಗೆ ಅಂಟಿಕೊಂಡಿವೆ. ಈ ಅಂಡಾಶಯಗಳಲ್ಲಿ ಮೊಟ್ಟೆಗಳು ಬೆಳೆದು ಹೊರಬರುತ್ತವೆ. ಎರೆಹುಳುಗಳ ಇನ್ನೊಂದು ವಿಶೇಷತೆಯೆಂದರೆ ಬಿಲಗಳನ್ನು ತೋಡುವುದು.

ಇದರಿಂದ ಭೂಮಿ ಟೊಳ್ಳಾಗಿ ಗಾಳಿಯಾಡಲು ಅನುಕೂಲವಾಗುತ್ತದೆ. ಹೀಗೆ ಆಹಾರ ಮತ್ತು ಮಣ್ಣನ್ನ ತಿಂದು ಎರೆಹುಳುಗಳು ವಿಸರ್ಜಿಸುವ ಮಲವೇ ಪೋಷಣಾಯುಕ್ತ ಎರೆಗೊಬ್ಬರ. ತೇವದ ಮಣ್ಣಿನಲ್ಲಿ ನಾವು ಕಾಣುವ ಕಸ್ತೂರಿ ಮಾತ್ರೆಗಳಂತಹ ಕುಪ್ಪೆಗಳೇ ಎರೆಹುಳುಗಳ ಮಲ, ಇದೇ ಕುಪ್ಪಲು ಮಣ್ಣು. ಈ ಮಣ್ಣಿನಲ್ಲಿ ಗಿಡಗಳ ಬೆಳವಣಿಗೆಗೆ ಪೂರಕವಾದ ಎಲ್ಲ ರೀತಿಯ ಲವಣಾಂಶಗಳು ಲಭ್ಯವಿರುತ್ತದೆ.

Exit mobile version