Bengaluru: ಭಾರತದ ಪಾಲಿಗೆ ಆಗಸ್ಟ್ (August) 23 ಐತಿಹಾಸಿಕ ದಿನವಾಗಿದ್ದು, ಭಾರತ ವಿಶ್ವದ ಬಾಹ್ಯಾಕಾಶ ಚರಿತ್ರೆಯ ಪುಟಗಳಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ. ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ( Modi) ಬೆಂಗಳೂರಿಗೇ ಬರಲಿದ್ದಾರೆ. ರಷ್ಯಾ, ಅಮೇರಿಕಾ (America), ಚೀನಾ ಬಳಿಕ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿದ್ದು, ಹಾಗೂ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿ ಹೊರಹೊಮ್ಮಿದೆ.

ಆಗಸ್ಟ್ 23, 2023ರ ಬುಧವಾರ ಸಂಜೆ 6.04. ನಿಮಿಷವನ್ನು ವಿಶ್ವದ ಬಾಹ್ಯಾಕಾಶ ಚರಿತ್ರೆಯ ಪುಟಗಳಲ್ಲಿ ಭಾರತ ಹೊಸ ಅಧ್ಯಾಯವನ್ನು ತೆರೆದ ಕ್ಷಣವಾಗಿದ್ದು, ಭಾರತದ ತಾಂತ್ರಿಕ, ಬೌದ್ಧಿಕ ಮತ್ತು ವೈಜ್ಞಾನಿಕ ಪರಾಕ್ರಮಕ್ಕೆ ವಿಶ್ವ ಸಮುದಾಯ ಮತ್ತೊಮ್ಮೆ ಸಾಕ್ಷಿಯಾದ ದಿನ. ಅಲ್ಲದೆ ಯಾರು ಕೂಡ ಎಂದಿಗೂ ಕಂಡರಿಯದ ಚಂದಿರನ ದಕ್ಷಿಣ ಧ್ರುವಕ್ಕೆ ಲಗ್ಗೆ ಇರಿಸುವ ಮೂಲಕ ಭಾರತ ಹೊಸ ಮೈಲುಗಲ್ಲು ಸಾಧಿಸಿದೆ.
ಇಸ್ರೊ ವಿಜ್ಞಾನಿಗಳ 41 ದಿನಗಳ ಶ್ರಮದ ತಪಸ್ಸು ಫಲಿಸಿದ್ದು, 140 ಕೋಟಿ ಭಾರತೀಯರ ಪ್ರಾರ್ಥನೆ ಫಲ ನೀಡಿದೆ. ಎತ್ತಿನ ಬಂಡಿಯ ಮೇಲೆ ರಾಕೆಟ್ (Rocket) ಸಾಗಿಸಿದ ಹಂತದಿಂದ ಚಂದಿರನ ಮೇಲೆ ರೋವರ್ ಬಂಡಿ ಇಳಿಸುವ ಹಂತಕ್ಕೆ ಏರಿದ ಇಸ್ರೊದ (ISRO) ಸಾಧನೆಗೆ ಇಡೀ ಜಗತ್ತೇ ಬೆರಗಾಗಿದ್ದು, ಚಂದ್ರ ಶಿಖಾರಿಯ ಬಳಿಕ ಈಗ ಭಾರತದ ದೃಷ್ಟಿ ಸೂರ್ಯನತ್ತ ನೆಟ್ಟಿದೆ. ರಷ್ಯಾ (Russia), ಅಮೆರಿಕ, ಚೀನಾ (China), ಬಳಿಕ ಚಂದರಿನ ಅಂಗಳದಲ್ಲಿ ನೌಕೆಯನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೆಗ್ಗುರುತು ಪಡೆದಿದೆ.

ಪ್ರಧಾನಿ ಮೋದಿ ಅವರೇ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ನಿಂದ (Johannesburg) ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ‘ಸೋಮನಾಥ್ ಜೀ.. ನಿಮ್ಮ ಹೆಸರೂ ಸೋಮನಾಥ್ (S Somanath) ಅಂದರೆ ಚಂದ್ರನ ಹೆಸರೇ. ನಿಮಗೆ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ತಿಳಿಸಿದರು. ಚಂದ್ರಯಾನ ಯಶಸ್ವಿಯ ಬಳಿಕ ಇಸ್ರೊ 2023ರ ಸೆಪ್ಟೆಂಬರ್‌ನಲ್ಲಿ (September) ಸೂರ್ಯನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ‘ಆದಿತ್ಯ-ಎಲ್1’ (Aditya-L1) ಹೆಸರಿನ ಈ ಯೋಜನೆಯಡಿ 5 ವರ್ಷಗಳ ಕಾಲ ಇಸ್ರೊ ಸೂರ್ಯನ ಅಧ್ಯಯನ ಕೈಗೊಳ್ಳಲಿದೆ.
ಸೂರ್ಯನನ್ನು ವಿವಿಧ ಕೋನಗಳಿಂದ ಅಧ್ಯಯನ ಮಾಡುವುದು, ಸೂರ್ಯನ ಸುತ್ತಲಿನ ವಾತಾವರಣ, ಸೌರ ಮಾರುತ, ಕೊರೊನಾ (Corona) ಉಷ್ಣಾಂಶ ಇತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ ಮಾಡಲಿದೆ. ಚಂದ್ರಯಾನ ಯಶಸ್ವಿ ಬಳಿಕ ಇಸ್ರೊ ಅಧ್ಯಕ್ಷ ಸೋಮನಾಥ್ ಅವರೇ ಬುಧವಾರ ಈ ಬಗ್ಗೆ ಪ್ರಕಟಿಸಿದ್ದಾರೆ. ಚಂದ್ರನ ನೆಲದ ಸೂಕ್ಷ್ಮ ಅಧ್ಯಯನ, ಅಲ್ಲಿದ ಖನಿಜಗಳು, ವಾತಾವರಣದ ಉಷ್ಣಾಂಶ, ಕಂಪನಗಳ ತೀವ್ರತೆ ಬಗ್ಗೆಯೂ ಇಸ್ರೊ ಅಧ್ಯಯನ ನಡೆಸಲಿದೆ. ಚಂದ್ರನ ಮೇಲಿನ ದಕ್ಷಿಣ ಧ್ರುವವು ಸದಾ ನೆರಳಿನಿಂದ ಕೂಡಿರುವ ಹಾಗೂ ಭೂಮಿಯಿಂದ ಶಾಶ್ವತವಾಗಿ ಮರೆಯಾಗಿರುವ ಪ್ರದೇಶ. ಇಲ್ಲಿ ಘನ ರೂಪದ ನೀರಿನ ಕುರುಹು ಪತ್ತೆಯಾಗಿದ್ದು, ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಇಸ್ರೊ ಉದ್ದೇಶಿಸಿದೆ.
ಭವ್ಯಶ್ರೀ ಆರ್.ಜೆ