ನಾಯಿಯಂತೆ ಬದಲಾಗಲು 12 ಲಕ್ಷ ಖರ್ಚು ಮಾಡಿದ ಯುವಕ!

Human Dog

ಮನುಷ್ಯರು ಎಂದ ಮೇಲೆ ಆಸೆಗಳು ಸಹಜ. ಅದರಲ್ಲೂ ಸುಂದರವಾಗಿ ಕಾಣಿಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಸುಂದರವಾಗಿ ಕಾಣಬೇಕು ಎಂದು ತರ ತರದ ಚಿಕಿತ್ಸೆಗಳು, ಸರ್ಜರಿಗಳಿಗೆ ಒಳಗಾಗುವ ಶ್ರೀಮಂತ ಜನರನ್ನು ನೋಡಿರುತ್ತೇವೆ.

ಸೆಲೆಬ್ರಿಟಿಗಳಂತೂ ಮೂಗು, ತುಟಿ, ಕೆನ್ನೆ, ಉಳಿದ ಅಂಗಗಳ ಗಾತ್ರ ಬದಲಿಸಿಕೊಳ್ಳಲು, ಹಲವಾರು ಸರ್ಜರಿಗಳನ್ನು ಮಾಡಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಗೊಂಬೆಯ ರೀತಿ ಕಾಣಲು, ಯಾವುದೋ ಸೆಲೆಬ್ರಿಟಿಯ ರೀತಿ ಕಾಣಲು ಲಕ್ಷಾಂತರ ರೂಪಾಯಿ ಹಣ ಸುರಿದು ಸರ್ಜರಿ ಮಾಡಿಸಿಕೊಳ್ಳುವುದನ್ನು ನೋಡಿರ್ತೀವಿ.
ಆದರೆ, ಇಲ್ಲೊಬ್ಬ ವ್ಯಕ್ತಿಗೆ ಇರುವ ಆಸೆ ಬಹುಶಃ ಜಗತ್ತಿನಲ್ಲಿಯೇ ಅತ್ಯಂತ ವಿಚಿತ್ರ ಎಂದು ಹೇಳಬಹುದು. ಆತನ ಬಹುಕಾಲದ ಆಸೆ ಎಂದರೆ ತಾನು ಪ್ರಾಣಿಯಂತೆ ಕಾಣಬೇಕು ಎನ್ನುವುದು, ಅದರಲ್ಲೂ ನಾಯಿಯಂತೆ ಕಾಣಿಸಬೇಕು ಎನ್ನುವುದು!

ಇತ್ತೀಚಿಗೆ ಈತನ ಆಸೆ ಈಡೇರಿದೆ. ಈಗ ಈ ವ್ಯಕ್ತಿ ನೋಡುವುದಕ್ಕೆ ನಾಯಿಯಂತೆಯೇ ಕಾಣಿಸುತ್ತಾನೆ! ಇದಕ್ಕಾಗಿ ಈತ ಖರ್ಚು ಮಾಡಿರುವ ಹಣವೆಷ್ಟು ಗೊತ್ತಾ? ಬರೋಬ್ಬರಿ 2 ಮಿಲಿಯನ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇಷ್ಟಕ್ಕೂ ಈ ವ್ಯಕ್ತಿ ಜಪಾನ್ ನಾಗರೀಕ. ಟ್ವಿಟ್ಟರ್ ಬಳಕೆದಾರ @toco_eevee ಅಕೌಂಟ್ ನಿಂದ ಈ ವ್ಯಕ್ತಿಯ ಶ್ವಾನಾವತಾರದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಟೋಕೊ, ನಾಯಿಯ ಉಡುಪಿನಲ್ಲಿರುವ ತನ್ನ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ತನ್ನ ಕಾಲುಗಳನ್ನು ಎತ್ತುವ, ಹೊರಳಾಡುವ ತರಹದ ಸಾಮಾನ್ಯ ನಾಯಿಯ ವರ್ತನೆಗಳನ್ನು ಅದರಲ್ಲಿ ತೋರಿಸಲಾಗಿದೆ. ಟೋಕೊ ಕಾಲ್ಲಿಯಾಗಿ ಪರಿವರ್ತನೆಯಾಗಿದ್ದಾನೆ ಎಂದು ಇದರಲ್ಲಿ ಹೇಳಲಾಗಿದೆ. ಕಾಲ್ಲಿ ಎನ್ನುವುದು ಒಂದು ನಾಯಿಯ ತಳಿ, ಝೆಪ್ಪೆಟ್ ಎಂಬ ಪ್ರಸಿದ್ಧ ವೃತ್ತಿಪರ ಸಂಸ್ಥೆ ಈ ವ್ಯಕ್ತಿಯ ವಿಚಿತ್ರ ಬಯಕೆಯನ್ನು ಈಡೇರಿಸಲು ಸಹಕರಿಸಿದೆ. ಝೆಪ್ಪೆಟ್ ಸಂಸ್ಥೆಯು ವಾಣಿಜ್ಯ ಬಳಕೆ, ಸಿನಿಮಾಗಳು ಮತ್ತು ಇತರೆ ಮನರಂಜನಾ ಕೇಂದ್ರಗಳಿಗೆ ಬೇಕಾದ ಕಲಾಕೃತಿಗಳನ್ನು ತಯಾರಿಸುತ್ತದೆ. ಸಿನಿಮಾ, ಕಿರುತೆರೆಗಳಿಗೆ ಬೇಕಾದ ವಸ್ತ್ರಗಳನ್ನು ಕೂಡ ಸಿದ್ಧಪಡಿಸುವ ಪ್ರಖ್ಯಾತ ಸಂಸ್ಥೆಯಾಗಿದೆ.


ಇದನ್ನು ತಯಾರಿಸಲು ಕಂಪೆನಿಗೆ ಹೆಚ್ಚು ಕಡಿಮೆ 40 ದಿನಗಳ ಸಮಯ ಬೇಕಾಯಿತಂತೆ. ಇದು ನಾಯಿಯನ್ನು ಹೋಲುವ ಕ್ಯಾಸ್ಟ್ಯೂಮ್ ಆಗಿದ್ದು, ಅದನ್ನು ಧರಿಸಿದ ಟೋಕೊ ಸಾಕ್ಷಾತ್ ನಾಯಿಯಂತೆ ಕಾಣಿಸುತ್ತಾನೆ! ನಾಲ್ಕು ಕಾಲಿನ ಪ್ರಾಣಿಗಳನ್ನು ಕಂಡರೆ ಈತನಿಗೆ ಬಹಳ ಇಷ್ಟವಂತೆ, ಅದರಲ್ಲಿಯೂ ಮುದ್ದಾಗಿರುವ ನಾಯಿ ಎಂದರೆ ಈತನಿಗೆ ಪ್ರಾಣ. ಹಾಗಾಗಿ ನಾಯಿಯಂತೆ ಕಾಣಿಸಿಕೊಳ್ಳಬೇಕು ಎಂಬುದು ಈತನ ಬಹುದಿನದ ಕನಸಾಗಿತ್ತಂತೆ. ಇದನ್ನು ಸ್ವತಃ ಟೋಕೋನೆ ಹೇಳಿಕೊಂಡಿದ್ದಾನೆ. ಈ ವೇಷ ಧರಿಸಿದಾಗ, ಕೈಕಾಲು ಅಂಗಾಂಗಗಳನ್ನು ಅಲುಗಾಡಿಸುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟವೇ.

ಆದರೆ ಅದು ಸಾಧ್ಯ ಎಂದು ಹೇಳಿದ್ದಾನೆ ಟೋಕೋ. ತುಂಬಾ ಹೆಚ್ಚು ಚಲಿಸಿದರೆ, ನಾಯಿಯಲ್ಲ ಎಂದು ತಿಳಿದುಬಿಡುತ್ತೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂದು ಈತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

Exit mobile version