ಜಾತ್ಯಾತೀತ ಪರಿಕಲ್ಪನೆ ನಮ್ಮ ಸರ್ಕಾರದ ಆಶಯ; ಬಿಎಸ್‌ವೈ

ಬೆಂಗಳೂರು, ಡಿ. 03: ಕನಕದಾಸರ ಸಮಾಜಮುಖಿ ನಿರ್ಮಾಣದ ಆಶಯವಾದ ಜಾತ್ಯಾತೀತ ಪರಿಕಲ್ಪನೆ ನಮ್ಮ ಸರ್ಕಾರದ ಆಶಯ ಕೂಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ‘ಕನಕ ಶ್ರೀ’ ಪ್ರಶಸ್ತಿ, ‘ಕನಕ ಗೌರವ’ ಹಾಗೂ ‘ಕನಕ ಯುವ ಪುರಸ್ಕಾರ’ವನ್ನು ಪ್ರದಾನ ಮಾಡಿ ಮಾತನಾಡಿದ ಅವರು ಸರ್ವ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಸದಾ ಕಾರ್ಯೋನ್ಮುಖವಾಗಿದೆ. ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಹಿಂದೆಂದೂ ನೀಡದಷ್ಟು ಆದ್ಯತೆಯನ್ನು ನಮ್ಮ ಸರ್ಕಾರ ನೀಡಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಭಿವೃದ್ಧಿಯೇ ನಮ್ಮ ಸರ್ವ ಕಾಲದ ಗುರಿ. ಈ ಗುರಿ ಮುಟ್ಟುವ ಹಾದಿಯಲ್ಲಿ ನಮ್ಮ ನಡೆ ನುಡಿ ಕೇಂದ್ರೀಕೃತವಾಗಿದೆ ಎಂದರು.

ಕನಕದಾಸರು ದಾಸ ಸಾಹಿತ್ಯದ ಸುವರ್ಣ ಯುಗದ ಪ್ರವೃತಕರು. ಮೌಢ್ಯ, ಕಂದಾಚಾರ, ಮೂಢನಂಬಿಕೆ ವಿರುದ್ಧ ಸಮರ ಸಾರಿದ ಸಮಾಜ ಸುಧಾರಕರಾಗಿದ್ದರು. ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು.  ಸರಳತೆ, ಭಾವೈಕ್ಯತೆ, ಜಾತ್ಯಾತೀತತೆ ಸರ್ವಕಾಲಿಕವಾಗಿ ಆದರ್ಶವಾಗಿದೆ. ಅಧಿಕಾರ, ಅಂತಸ್ತು, ಸಂಪತ್ತು, ಎಲ್ಲವನ್ನೂ ತೊರೆದು, ಅತ್ಮಾವಲೋಕನಕ್ಕಾಗಿ ಲೋಕಜ್ಞಾನದ ಮಾರ್ಗವನ್ನು ಕಂಡುಕೊAಡ ಕನಕದಾಸರ ಬದುಕೇ ನಮ್ಮೆಲ್ಲರಿಗೂ ಆದರ್ಶ. ಆಧುನಿಕತೆಯ ಅಂಧಾನುಕಾರದಲ್ಲಿ ಮೌಲ್ಯಗಳನ್ನೇ ಮರೆತಿರುವ ಯುವ ಜನತೆಗೆ ಕನಕದಾಸರ ಜೀವನಾದರ್ಶವನ್ನು ತಿಳಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ನಾವೆಲ್ಲರೂ ನಮ್ಮ ನಾಡನ್ನು ಸಂತರು ತೋರಿಸಿರುವ ಮಾರ್ಗದಲ್ಲಿ ಮುನ್ನಡೆಸೋಣ ಎಂದು ತಿಳಿಸಿದರು.

ಕನಕದಾಸರ ಜನ್ಮ ಸ್ಥಳವಾದ ಬಾಡಾ, ಮತ್ತು ಧರ್ಮಭೂಮಿ ಕಾಗಿನೆಲೆಯನ್ನು ಕೂಡಲಸಂಗಮ ಮಾದರಿಯಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳು ಇಷ್ಟು ವರ್ಷಗಳ ಆಯ್ಕೆಗಳನ್ನು ನೋಡಿದರೆ ಈ ಬಾರಿ ಪ್ರಶಸ್ತಿಗೆ ಉತ್ತಮರನ್ನು ಆಯ್ಕೆ ಮಾಡಲಾಗಿದೆ ಎಂದರು. ಜಯಂತಿಗಳAದು ಸಂತರ ಫೋಟೋ ಇಟ್ಟು ಪೂಜೆ ಮಾಡುವುದಲ್ಲ. ಸರ್ಕಾರದ ಅಧಿಕಾರಿಗಳಾದವರು ಆಡಳಿತ ವಾಹಿನಿಯ ಮುಖವಾಹಿನಿಯಾಗಿರುತ್ತಾರೆ. ಸಂತರ ಕುರಿತು ತಿಳಿಯುವ ಜೊತೆಗೆ ಅವರ ಆದರ್ಶವನ್ನು ಪಾಲಿಸುವಂತ್ತಾದಾಗ ಮಾತ್ರ ಸಮಾಜ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕನಕದಾಸ, ಬಸವಣ್ಣ, ಅಂಬೇಡ್ಕರ್, ಬುದ್ದ ಮುಂತಾದ ಸಂತರ ಹೃದಯ ತಾಯಿ ಹೃದಯ. ತಾಯಿ ಹೇಗೆ ತನ್ನ ಎಲ್ಲಾ ಮಕ್ಕಳನ್ನು  ಒಂದೇ ಭಾವನೆಯಿಂದ ನೋಡುತ್ತಾರೋ ಹಾಗೆಯೇ ಇವರುಗಳು ಎಲ್ಲರನ್ನು ಸಮಾನತೆಯಿಂದ ಕಂಡವರು. ಅದೇ ರೀತಿ ಸರ್ಕಾರದಲ್ಲಿ ಆಡಳಿತ ನಡೆಸುವವರ ಮನೋಭಾವನೆಯು ತಾಯಿ ಹೃದಯವುಳ್ಳದ್ದಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ತೋಳ್ಬಲ, ಅಧಿಕಾರ ಬಲ, ಹಣದ ಬಲದಿಂದ ಯಾವ ಜನರು ನಲುಗುತ್ತಿದ್ದಾರೋ ಅವರನ್ನು ರಕ್ಷಣೆ ಮಾಡುವಂತಹ ನಾಯಕತ್ವವೇ ಪ್ರಜಾಪ್ರಭುತ್ವದ ನಾಯಕತ್ವ ಎಂದು ಕನಕದಾಸರು ಅವತ್ತೇ ಹೇಳಿದ್ದರು.  

ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯದ ಜನರ ಹಿತವನ್ನು ಕಾಯ್ದುಕೊಂಡು  ಮುನ್ನಡೆಯುವಂತೆ ಸರ್ಕಾರಕ್ಕೆ ಕಿವಿ ಮಾತು ಹೇಳಿದರು. ಹಾಗೆಯೇ ಕನಕದಾಸ ಅಧ್ಯಯನ ಸಂಸ್ಥೆಗೆ ಸಂಯೋಜಕರನ್ನು ನೇಮಕ ಮಾಡದ ಕಾರಣ ಎರಡು ವರ್ಷಗಳಿಂದ ಸಂಸ್ಥೆಯ ಕಾರ್ಯಚಟುವಟಿಕೆ ಸ್ಥಗಿತಗೊಂಡಿರುವುದರಿAದ ಸಂಸ್ಥೆಗೆ ಸಂಯೋಜಕರೊಬ್ಬರನ್ನು ನೇಮಿಸುವಂತೆ ಸ್ವಾಮೀಜಿಗಳು ತಿಳಿಸಿದರು.

ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಆಚಾರ, ವಿಚಾರ, ತತ್ವಗಳನ್ನು ಅಳವಡಿಸಿಕೊಂಡು ನಾಡಿಗೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಸಾಧಕರುಗಳಾದ ದಾವಣಗೆರೆಯ ಯುವಧರ್ಮ ರಾಮಣ್ಣ ಅವರಿಗೆ ಪ್ರಸಕ್ತ ಸಾಲಿನ ‘ಕನಕ ಶ್ರೀ’ ಪ್ರಶಸ್ತಿಯನ್ನು, ಹಾವೇರಿಯ             ಡಾ. ಶಶಿಧರ ಜಿ. ವೈದ್ಯ, ಅವರಿಗೆ ‘ಕನಕ ಗೌರವ ಪುರಸ್ಕಾರ’ ವನ್ನು, ಬೆಂಗಳೂರಿನ                   ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರಿಗೆ ಕನಕ ಯುವ ಪುರಸ್ಕಾರವನ್ನು, ೨೦೧೯ ನೇ ಸಾಲಿನ ‘ಕನಕ ಗೌರವ ಪುರಸ್ಕಾರ’ವನ್ನು ಮಂಗಳೂರಿನ ಪ್ರೊ.ಬಿ. ಶಿವರಾಮ ಶೆಟ್ಟಿ ಅವರಿಗೆ ಹಾಗೂ ಉಡುಪಿಯ       ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ‘ಕನಕ ಯುವ ಪುರಸ್ಕಾರ’ವನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯರಾದ ರಮೇಶ್ ಗೌಡ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಜಿ.ಮರಿಸ್ವಾಮಿ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Exit mobile version