ಆರ್‌ ಎಸ್‌ ಎಸ್‌ ವಿರುದ್ದ ಹೇಳಿಕೆ ಹಿನ್ನಲೆ ಜಾವೇದ್‌ ಅಖ್ತರ್ ವಿರುದ್ದ ಎಫ್ಐಆರ್ ದಾಖಲು

ಮುಂಬೈ ಅ 5 : ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬಯಿ ಪೊಲೀಸರು ಬರಹಗಾರ ಜಾವೇದ್ ಅಖ್ತರ್  ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಮೂಲದ ವಕೀಲ ಸಂತೋಷ್ ದುಬೆ ಎನ್ನುವರು  ಸಲ್ಲಿಸಿದ ದೂರಿನ ಮೇರೆಗೆ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 500 (ಮಾನನಷ್ಟ ಮೊಕದ್ದಮೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಲುಂಡ್ ಪೊಲೀಸ್ ಠಾಣೆಯ ಅಧಿಕಾರಿ  ಮಾಹಿತಿ ನೀಡಿದ್ದಾರೆ.

ಅಖ್ತರ್ ಕಳೆದ ತಿಂಗಳು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಮಾಹಿತಿ ನೀಡಿದ್ದಲ್ಲದೇ ಮಾನಹಾನಿಕರ ಟೀಕೆಗಳನ್ನು ಮಾಡಿದ ಆರೋಪ ಮಾಡಿದ್ದರು. ಇದಕ್ಕಾಗಿ ಸಂತೋಷ್ ದುಬೆ ಅವರು ಅಖ್ತರ್ ಕ್ಷಮೆಯಾಚಿಸಬೇಕು ಎಂದು ನೋಟಿಸ್ ಕಳುಹಿಸಿದ್ದರು. ಬಾಲಿವುಡ್​ನಲ್ಲಿ ತನ್ನ ಗೀತೆಗಳ ಮೂಲಕ ಪ್ರಸಿದ್ದರಾಗಿರುವ ಅಖ್ತರ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಾಲಿಬಾನ್ ಮತ್ತು ಹಿಂದೂ ಉಗ್ರರ ನಡುವೆ ಯಾವುದೇ ವ್ಯತ್ಯಸವಿಲ್ಲ ಎಂದು ಹೇಳಿಕೆ ನೀಡಿದ್ದರು.

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅಖ್ತರ್ ಐಪಿಸಿ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿ ಅಪರಾಧ ಮಾಡಿದ್ದಾರೆ ಎಂದು ದುಬೆ ತನ್ನ ನೋಟಿಸ್‌ನಲ್ಲಿ ಹೇಳಿದ್ದಾರೆ. ನಾನು ಈ ಹಿಂದೆ ಅಖ್ತರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದೆ ಮತ್ತು ಅವರ ಹೇಳಿಕೆಗೆ ಕ್ಷಮೆ ಕೇಳುವಂತೆ ಕೇಳಿದ್ದೆ, ಆದರೆ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಈಗ ನನ್ನ ದೂರಿನ ಮೇರೆಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಕೀಲರು ಪಿಟಿಐಗೆ ತಿಳಿಸಿದ್ದಾರೆ. ಮಾಜಿ ಸಂಸತ್ ಸದಸ್ಯರಾಗಿರುವ ಅಖ್ತರ್, ಸೆಪ್ಟೆಂಬರ್ 3 ರಂದು ಮಾಧ್ಯಮವೊಂದರ ಸಂದರ್ಶನದಲ್ಲಿ, ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ತಾಲಿಬಾನ್ ಅನ್ನು ಆರ್ ಎಸ್ ಎಸ್ ನೊಂದಿಗೆ ಹೋಲಿಸಿದ್ದರು. ಈ ಜನರು ಒಂದೇ ಮನಸ್ಥಿತಿಯವರು – ಅದು ಮುಸ್ಲಿಂ, ಕ್ರಿಶ್ಚಿಯನ್, ಯಹೂದಿಗಳು ಅಥವಾ ಹಿಂದೂಗಳು ಯಾರೇ ಆಗಲಿ ಎಲ್ಲ ಒಂದೇ ಎಂದಿದ್ದರು. ಸಹಜವಾಗಿ, ತಾಲಿಬಾನ್ ಅನಾಗರಿಕವಾಗಿದೆ, ಮತ್ತು ಅವರ ಕ್ರಮಗಳು ಖಂಡನೀಯ, ಆದರೆ ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಭಜರಂಗದಳವನ್ನು ಬೆಂಬಲಿಸುವವರು ಎಲ್ಲರೂ ಅದೇ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ಯಾವುದೇ ಸಾಕ್ಷಿಗಳು ಇಲ್ಲದೇ ಆರ್​ಎಸ್​ಎಸ್​ ಬಗ್ಗೆ ಜಾವೇದ್​ ಅಖ್ತರ್​ ಅವರು  ಮಾತುಗಳನ್ನು ಆಡಿದ್ದಾರೆ. ಕೇಂದ್ರದ ಅನೇಕ ಮಂತ್ರಿಗಳು ಆರ್​ಎಸ್​ಎಸ್​ ಬೆಂಬಲಿಗರಾಗಿದ್ದಾರೆ. ಅಂಥ ಸಂಘಟನೆ ಬಗ್ಗೆ ಜಾವೇದ್​ ಅಖ್ತರ್​ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವರು ಕ್ಷಮೆ ಕೇಳಬೇಕು ಎಂದು ಆರ್​ಎಸ್​ಎಸ್​ ಕಾರ್ಯಕರ್ತರು ಮತ್ತು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

ಅದೇ ವೇಳೆ ಮುಂಬೈನಲ್ಲಿ ಅಖ್ತರ್ ಅವರ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಹು ಪ್ರದೇಶದ ಇಸ್ಕಾನ್ ದೇವಾಲಯದ ಬಳಿ ಅಖ್ತರ್ ನಿವಾಸದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು

Exit mobile version