ಮಂಡ್ಯ, ಮಾ. 02: KRS ಆಣೆಕಟ್ಟೆಯ ಮೇಲೆ ಯುವಕನೊಬ್ಬ ಸರ್ಕಾರಿ ಜೀಪಿನಲ್ಲಿ ಮೋಜಿನ ಸವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಪ್ ನೀಡಿದ್ದ ಪೋಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಅಣೆಕಟ್ಟಿನ ಮೇಲೆ ಪೊಲೀಸ್ ಜೀಪ್ ಚಲಾಯಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದಲ್ಲದೆ ಆತನಿಗೆ ಜೀಪ್ ನೀಡುವ ಮೂಲಕ ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡಿಕೊಂಡ
ಆರೋಪದಡಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯ ಪೋಲೀಸ್ ಇನ್ಸ್‌ಪೆಕ್ಟರ್ ಎಸ್.ಬಿ.ಸ್ವಾಮಿ ಅವರನ್ನು ಅಮಾನತ್ತು ಮಾಡಲಾಗಿದೆ.
ಯುವಕನೊಬ್ಬ ಸರ್ಕಾರಿ ಜೀಪ್ ಚಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಪಕ್ಕದಲ್ಲಿ ಕೂತು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದರು. ಈ ದೃಶಯಾವಳಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಮಾಧ್ಯಮಗಳೂ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು, ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಆಣೆಕಟ್ಟೆಯ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೂ ಯುವಕ ಮೋಜಿನ ಸವಾರಿ ಮಾಡಲು ಅವಕಾಶ ನೀಡಲಾಗಿರುವುದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.