ಪಿಒಕೆಯಿಂದ ನಿರ್ಗಮಿಸಿ ಪಾಕ್‌ಗೆ ಎಚ್ಚರಿಕೆ ಕೊಟ್ಟ – ಕಾಜಲ್ ಭಟ್

ನ್ಯೂಯಾರ್ಕ್ ನ 17 : ವಿಶ್ವಸಂಸ್ಥೆ ನೀಡಿರುವ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡಿರುವ ಪಾಕಿಸ್ತಾನ ಭಾರತದ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ನಡೆಸಿದೆ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಕಾಶ್ಮೀರ ಸಮಸ್ಯೆಯನ್ನು ಕೆದಕುತ್ತಿರುವ ಇಸ್ಲಾಮಾಬಾದ್‌ಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ತಾಕೀತು ಮಾಡಿದೆ.

“ನಾನು ಭಾರತದ ಸ್ಥಾನವನ್ನು ಪುನರುಚ್ಛರಿಸಲು ಬಯಸುತ್ತೇನೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳಾಗಿದ್ದು,ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿರುತ್ತದೆ. ಇದು ಪಾಕಿಸ್ತಾನದ ಅಕ್ರಮ ಆಕ್ರಮಿತ ಪ್ರದೇಶಗಳನ್ನು ಕೂಡ ಒಳಗೊಂಡಿದೆ. ತನ್ನ ಅಕ್ರಮ ವಶದಲ್ಲಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ” ಎಂದು ಯುಎನ್‌ಗೆ ಭಾರತದ ಖಾಯಂ ಮಿಷನ್‌ನ ಸಲಹೆಗಾರ್ತಿ ಡಾ ಕಾಜಲ್ ಭಟ್ ಮಂಗಳವಾರ ಹೇಳಿದ್ದಾರೆ.

ಭಾರತದ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡಲು ವಿಶ್ವಸಂಸ್ಥೆ ನೀಡಿದ ವೇದಿಕೆಗಳನ್ನು ಪಾಕಿಸ್ತಾನದ ಪ್ರತಿನಿಧಿ ದುರುಪಯೋಗಪಡಿಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಒತ್ತಿ ಹೇಳಿದ ಭಟ್, ಪಾಕಿಸ್ತಾನದ ಪ್ರತಿನಿಧಿಗಳು ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

Exit mobile version