ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ? ಸುಳಿವು ನೀಡಿದ ಬಿಜೆಪಿ ವರಿಷ್ಠರು!

bjp

ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ. ಆದರೆ ಇದೀಗ ಬಿಜೆಪಿ(Karnataka BJP plan) ಅವಧಿ ಪೂರ್ವ ವಿಧಾನಸಭೆ ಚುನಾವಣೆ ನಡೆಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬಿಜೆಪಿಯ ಈ ತಂತ್ರದ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳಿವೆ. ಕೇಂದ್ರ ಬಿಜೆಪಿ ವರಿಷ್ಠರ ಈ ತೀರ್ಮಾನಕ್ಕೆ ರಾಜ್ಯ ನಾಯಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಅವಧಿಗೂ ಮುನ್ನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ, ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಗಳಿವೆ ಎಂದು ಅನೇಕ ರಾಜ್ಯ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನಲೇ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿರುವುದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ 2022ರ ಅಂತ್ಯದಲ್ಲಿ ಗುಜರಾತ್ ಮತ್ತು ಹಿಮಾಲಯ ಪ್ರದೇಶ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಅವುಗಳ ಜೊತೆಗೆ ಕರ್ನಾಟಕ ರಾಜ್ಯ ವಿಧಾನಸಭೆಯ ಚುನಾವಣೆ ನಡೆಸಿದರೆ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಚಾರ ಮತ್ತು ಸಂಘಟನೆ ದೃಷ್ಟಿಯಿಂದ ಬಿಜೆಪಿ ಈಗಾಗಲೇ ಉತ್ತಮ ತಯಾರಿ ಮಾಡಿಕೊಂಡಿದ್ದು, ಚುನಾವಣೆ ನಡೆದರೆ, ಮೂರು ರಾಜ್ಯಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವುದು ದೆಹಲಿ ನಾಯಕರ ಲೆಕ್ಕಾಚಾರ.

ದೆಹಲಿ ನಾಯಕರ ಈ ಲೆಕ್ಕಾಚಾರಕ್ಕೆ ಪೂರಕವಾಗಿ ರಾಜ್ಯದಲ್ಲಿ ನಾಲ್ಕು ತಂಡಗಳು ಪ್ರಚಾರಕಾರ್ಯ ಆರಂಭಿಸುವ ಸಿದ್ದತೆ ನಡೆಸಿವೆ. ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಾಲ್ಕು ತಂಡಗಳು ರಾಜ್ಯ ಪ್ರವಾಸ ಮಾಡಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸುವುದು, ಜಿಲ್ಲಾವಾರು ಸಂಘಟನೆಯನ್ನು ಸದೃಢಗೊಳಿಸುವುದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ನಿಯೋಜನೆಗೆ ವಿಶೇಷ ಗಮನ ನೀಡುವುದು, ಕೆಳ ಮಟ್ಟದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಹೀಗೆ ಅನೇಕ ಕಾರ್ಯತಂತ್ರಗಳನ್ನು ಇಟ್ಟುಕೊಂಡು ಈ ನಾಲ್ಕು ತಂಡಗಳು ಪ್ರವಾಸ ಕೈಗೊಳ್ಳಲಿವೆ.
ಇನ್ನು ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ನಾಯಕರ ನಡೆಯನ್ನೇ ಇಟ್ಟುಕೊಂಡು, ಉತ್ತರಕರ್ನಾಟಕದಲ್ಲಿ ಲಿಂಗಾಯತ ಮತ ಬುಟ್ಟಿಗೆ ಕೈಹಾಕಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಇದರ ಸುಳಿವು ಅರಿತಿರುವ ಕೇಂದ್ರ ಬಿಜೆಪಿ ವರಿಷ್ಠರು ಉತ್ತರಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಎಸ್‍ವೈಗೆ ನೀಡಿದೆ. ಈ ಮೂಲಕ ಬಿಜೆಪಿಯಲ್ಲಿ ಬಿಎಸ್‍ವೈ ಈಗಲೂ ‘ಕಿಂಗ್ ಮೇಕರ್’ ಎಂಬುದನ್ನು ಲಿಂಗಾಯತರಿಗೆ ಮನವರಿಕೆ ಮಾಡಿಕೊಡುವ ಕಸರತ್ತು ನಡೆಸಿದೆ. ಇನ್ನು ರಾಜಕೀಯ ತಜ್ಞರ ಪ್ರಕಾರ ಸದ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ. 

ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದರೆ ಇಡೀ ದೇಶದಲ್ಲಿ ‘ಯೋಗಿ’ ಮೂಲಕ ಹಿಂದುತ್ವದ ಮತಬ್ಯಾಂಕ್ ಒಗ್ಗೂಡಲಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ರಾಜ್ಯದಲ್ಲಿ ಸದ್ದು ಮಾಡಿದ ಹಿಜಾಬ್ ಮತ್ತು ಹರ್ಷ ಹತ್ಯೆ ಪ್ರಕರಣಗಳು ಹಿಂದೂ ಮತ ಬ್ಯಾಂಕ್ ಅನ್ನು ಭದ್ರಗೊಳಿಸಿವೆ. ಇನ್ನು ಪ್ರತಿಪಕ್ಷ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಈ ನಡುವೆ ಕಾಂಗ್ರೆಸ್‍ನಲ್ಲಿ ಬಣ ತಿಕ್ಕಾಣ ತೀವ್ರಗೊಳ್ಳುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ಹಳೇ ಮೈಸೂರು ಭಾಗದವರಾಗಿರುವುದರಿಂದ, ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆ ಎದುರಿಸುತ್ತಿದೆ.

ಎಸ್.ಆರ್. ಪಾಟೀಲ್, ಶಿವಾನಂದ್ ಪಾಟೀಲ್, ಆರ್.ವಿ. ದೇಶಪಾಂಡೆ, ಕೋಳಿವಾಡ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ಎಲ್ಲ ಸಂಗತಿಗಳು ಬಿಜೆಪಿಗೆ ವರದಾನವಾಗಲಿದೆ.
Exit mobile version