ರೈತರ ಆತ್ಮಹತ್ಯೆ ಪ್ರಕರಣ : ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು ಡಿ 1 : ರೈತರ ಆತ್ಮಹತ್ಯೆ ಪ್ರಕರಣದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಲೋಕಸಭೆಗೆ ಮಾಹಿತಿ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, 2019ರಲ್ಲಿ ದೇಶದಲ್ಲಿ 5957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ 2020ರಲ್ಲಿ ಈ ಪ್ರಮಾಣ 5579ಕ್ಕೆ ಇಳಿದಿದೆ ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
ದೇಶಕ್ಕೆ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 2567 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಎರಡನೇ‌ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 1072, ಆಂಧ್ರಪ್ರದೇಶದಲ್ಲಿ 564, ತೆಲಂಗಾಣದಲ್ಲಿ 466 ಹಾಗೂ ಮಧ್ಯಪ್ರದೇಶದಲ್ಲಿ 235 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ‌ ನೀಡಿದ್ದಾರೆ.
ರಸಗೊಬ್ಬರ ಸಮಸ್ಯೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವರದಿ ಸ್ವೀಕರಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2020 ರ ವರದಿಯಲ್ಲಿ ರೈತರ ಆತ್ಮಹತ್ಯೆಗೆ ಪ್ರತ್ಯೇಕ ಕಾರಣಗಳನ್ನು ನೀಡಿಲ್ಲ ಎಂದು ಸಚಿವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Exit mobile version