ಇಲಿಗಳು ತಿಂದು ಬಿಟ್ಟಿದ್ದನ್ನು ಇಲ್ಲಿ ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ!

Rats temple

ಸಂಪ್ರದಾಯ(Tradition) ಆಚರಣೆ ನಂಬಿಕೆಗಳ ತವರು ನಮ್ಮ ದೇಶ. ಅಂತಹ ನಂಬಿಕೆಗಳಲ್ಲಿ ಒಂದು ‘ದೇವರು’, ದೇವರು ಅನ್ನುವುದು ನಮ್ಮ ಶಕ್ತಿ, ಬದುಕಿನಲ್ಲಿ ಸೋತಾಗ ಧೈರ್ಯ ನೀಡುವ ನಂಬಿಕೆ.

ನಾವು ದೇವರನ್ನು ವಿಧ ವಿಧವಾದ ರೂಪಗಳಲ್ಲಿ ಪೂಜಿಸುತ್ತೇವೆ. ನಮ್ಮ ದೇಶದಲ್ಲಿ ಇರುವ ದೇವಸ್ಥಾನಗಳಿಗೆ ಲೆಕ್ಕವಿಲ್ಲ. ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ಹಿನ್ನೆಲೆಯಿರುತ್ತದೆ. ಹಾಗೆಯೇ ಪ್ರತಿ ದೇವಸ್ಥಾನದಲ್ಲೂ ಅದರದ್ದೇ ಆದ ಆಚರಣೆಗಳು ಪಾಲಿಸಲ್ಪಡುತ್ತವೆ. ಕೆಲವೊಂದು ದೇವಾಲಯಗಳ ಆಚರಣೆ ನೋಡಿದರೆ ಹೀಗೂ ಉಂಟೇ ಎನ್ನಿಸುತ್ತದೆ. ಇನ್ನು ಕೆಲವೊಮ್ಮೆ ಕೆಲ ಘಟನೆಗಳು ನಾಸ್ತಿಕರೇ ಹುಬ್ಬೇರಿಸುವಂತೆ ಶಕ್ತಿಯ ಅಸ್ತಿತ್ವವನ್ನು ಸಾಬೀತುಪಡಿಸುತ್ತವೆ. ಈಗ ನಾವು ಹೇಳುತ್ತಿರುವ ದೇವಸ್ಥಾನವೂ ಕೂಡಾ ಹಾಗೆಯೇ.. ಈ ದೇವಿಯ ದೇವಸ್ಥಾನ ಅಚ್ಚರಿಗಳ ಆಗರ, ಈ ದೇವಾಲಯದಲ್ಲಿ ಇಲಿಗಳದ್ದೇ ಪಾರುಪತ್ಯ.

ಎಲ್ಲಿ ನೋಡಿದರೂ ಇಲಿಗಳೇ(Rats) ಕಣ್ಣಿಗೆ ಬೀಳುತ್ತವೆ. ಮನಸೋ ಇಚ್ಛೆ ಓಡಾಡುವ ಇಲಿಗಳು ಇಲ್ಲಿ ಆರಾಧಿಸಲ್ಪಡುತ್ತವೆ. ಈ ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಬೇಡಿಕೆಗಳೂ ಈಡೇರುತ್ತದೆ ಎನ್ನುವುದು ಇಲ್ಲಿನ ಮತ್ತೊಂದು ವಿಶೇಷ. ಇಲಿಗಳ ದೇವಸ್ಥಾನವೆಂದೇ ಖ್ಯಾತವಾಗಿರುವ ಕರ್ಣಿ ದೇವಾಲಯ ರಾಜಸ್ಥಾನದ ಬಿಕಾನೆರ್ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದಲ್ಲಿ ಸುಮಾರು 20 ರಿಂದ 25 ಸಾವಿರ ಇಲಿಗಳಿವೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ಇಲ್ಲಿ ಇಲಿಗಳು ತಿಂದು ಬಿಟ್ಟ ಆಹಾರವನ್ನೇ ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ!

ಇಲ್ಲಿಯವರೆಗೂ ಈ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಯಾರೊಬ್ಬರೂ ಅನಾರೋಗ್ಯಕ್ಕೆ ತುತ್ತಾಗಿಲ್ಲ ಎನ್ನುವುದು ವಿಶೇಷ. ಅಷ್ಟೇ ಅಲ್ಲ, ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಇಲಿಗಳಿದ್ದರೂ ದೇವಸ್ಥಾನದಲ್ಲಿ ಯಾವುದೇ ದುರ್ವಾಸನೆ ಬರುವುದಿಲ್ಲ ಎನ್ನುವುದು ಅಚ್ಚರಿಯೇ ಸರಿ. ಇಲ್ಲಿ ಇಲಿಗಳನ್ನು ಭಕ್ತಿಯಿಂದ ಕಾಬಾ ಎಂದು ಕರೆಯುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ಒಳಗೆ ಬಂದಾಗ ತಮ್ಮ ಪಾದಗಳನ್ನು ಎಳೆದುಕೊಂಡು ನಡೆಯಬೇಕಾಗುತ್ತದೆ. ಏಕೆಂದರೆ ಇಲಿಗಳು ಭಕ್ತರ ಕಾಲಿನಡಿಗೆ ಬಿದ್ದು ಹಾನಿಯಾಗಬಾರದು ಎಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

ದೇವಾಲಯದಲ್ಲಿ ಕೇವಲ ಕಪ್ಪು ಇಲಿಗಳಷ್ಟೇ ಅಲ್ಲ, ಬಿಳಿ ಇಲಿಗಳೂ ಇವೆ. ಆದರೆ ಕಪ್ಪು ಇಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಇಲ್ಲಿನ ಮತ್ತೊಂದು ವಿಶೇಷ ನಂಬಿಕೆಯೆಂದರೆ, ಕರ್ಣಿ ಮಾತಾ ಮಂದಿರದಲ್ಲಿ ಭಕ್ತರಲ್ಲಿ ಯಾರ ಕಣ್ಣಿಗೆ ಬಿಳಿ ಇಲಿ ಬೀಳುತ್ತದೆಯೋ ಅವರ ಇಷ್ಟಾರ್ಥ ಖಂಡಿತ ಸಿದ್ದಿಸುತ್ತದೆಯಂತೆ. ನವರಾತ್ರಿ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ನೆಲೆಸಿರುವ ಕರ್ಣಿ ಮಾತೆಯನ್ನು ದೇವಿ ಜಗದಂಬೆಯ ಅವತಾರ ಎಂದು ಪೂಜಿಸಲಾಗುತ್ತದೆ. ಜಾನಪದ ಕಥೆಗಳ ಪ್ರಕಾರ, ಕರ್ಣಿ ಮಾತೆ 1387 ರಲ್ಲಿ ಚಾರನ್ ಕುಟುಂಬದಲ್ಲಿ ಜನಿಸಿದರು.

ಅವರ ಬಾಲ್ಯದ ಹೆಸರು ರಿಗೂ ಬಾಯಿ. ರಿಗೂ ಬಾಯಿಯವರ ವಿವಾಹವು ಕಿಪೋಜಿ ಚರಣ್ ಅವರೊಂದಿಗೆ ನೆರವೇರುತ್ತದೆ. ಆದರೆ ರಿಗೂ ಬಾಯಿಗೆ ಸಂಸಾರ ಜೀವನದಲ್ಲಿ ಆಸಕ್ತಿ ಇರದ ಕಾರಣ , ತಮ್ಮ ಸಹೋದರಿ, ಗುಲಾಬ್ ಅವರನ್ನು ಪತಿ ಕಿಪೋಜಿ ಚರಣ್ ಅವರೊಂದಿಗೆ ವಿವಾಹ ಮಾಡಿಕೊಟ್ಟು, ತಾನು ದೇವಿಯ ಸೇವೆಯಲ್ಲಿ ತೊಡಗುತ್ತಾರೆ. ಅಲ್ಲದೆ ಜನ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ. ಹೀಗೆ ಜನರ ಸೇವೆ ಮಾಡುವ ವೇಳೆಯಲ್ಲಿ ನಡೆಯುತ್ತಿದ್ದ ಕೆಲ ಪವಾಡಗಳಿಂದ,

ರಿಗೂ ಬಾಯಿಯನ್ನು ಜನ ಕರ್ಣಿ ಮಾತಾ ಎಂಬ ಹೆಸರಿನಲ್ಲಿ ಪೂಜಿಸಲು ಪ್ರಾರಂಭಿಸ್ತಾರೆ. ಇದೇ ಕರ್ಣಿ ಮಾತೆಯನ್ನು ಈಗಲೂ ಇಲ್ಲಿ ದೇವತೆ ಎಂದು ಪೂಜಿಸಲಾಗುತ್ತದೆ.

Exit mobile version