ತಿರುವನಂತಪುರಂ : ಆರೋಗ್ಯ ಕಾರ್ಯಕರ್ತರ(Health Workers) ಮೇಲೆ ಹಲ್ಲೆ ನಡೆಸುವುದು ಮತ್ತು ನಿಂದನೆ ಮಾಡುವುದು ಅಪರಾಧವಾಗುತ್ತದೆ. ಅದೇ ರೀತಿ ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಆ ಕೃತ್ಯವು ಜಾಮೀನು ರಹಿತ(Non-Bail) ಅಪರಾಧವಾಗುತ್ತದೆ ಎಂದು ಕೇರಳ ಹೈಕೋರ್ಟ್(Kerala Highcourt) ಅಭಿಪ್ರಾಯಪಟ್ಟಿದೆ.

ಹಲ್ಲೆ ನಡೆಸದೇ ಇದ್ದರೂ ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ. ಇದೊಂದು ಘೋರ ಅಪರಾಧವಾಗಿದ್ದು, ಜಾಮೀನು ನೀಡಲು ಸಾಧ್ಯವಿಲ್ಲವೆಂದು, ಜಾಮೀನು ನಿರಾಕರಿಸಿದೆ.
ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸುವುದು ಮತ್ತು ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ಈ ರೀತಿಯ ಕ್ರಮ ಮತ್ತು ಕಾನೂನುಗಳು ಅವಶ್ಯಕ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೇರಳ ಆರೋಗ್ಯ ಕಾರ್ಯಕರ್ತರ ಕಾಯ್ದೆಯಲ್ಲಿರುವ ‘ಹಿಂಸೆ’ ಪದವು ವಿಶಾಲ ಅರ್ಥವನ್ನು ಒಳಗೊಂಡಿದೆ. ಕಾಯ್ದೆಯ ಮುಖ್ಯಉದ್ದೇಶ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಬೆದರಿಕೆ ಉಂಟು ಮಾಡುವುದನ್ನು ತಡೆಯಬೇಕು ಎಂಬುದಾಗಿದೆ ಎಂದು ನ್ಯಾಯಪೀಠ ಹೇಳಿದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಆರೋಪಿ ವಿರುದ್ಧ IPC ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), ಸೆಕ್ಷನ್ 353 (ಸಾರ್ವಜನಿಕ ಸೇವಕರ ಕರ್ತವ್ಯವನ್ನು ತಡೆಯಲು ಹಲ್ಲೆ ಮಾಡುವುದು), ಸೆಕ್ಷನ್ 506 (ಕ್ರಿಮಿನಲ್ ಅಪರಾಧಕ್ಕಾಗಿ ದಂಡನೆ) ಹಾಗೂ ಸೆಕ್ಷನ್ 3 ಮತ್ತು 4(1) ಆರೋಗ್ಯ ಆರೈಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅರ್ಜಿದಾರರ ಪರ ವಕೀಲ ಆರ್.ಶ್ರೀಹರಿ ವಾದ ಮಂಡಿಸಿದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಶಾದ್ ಪ್ರತಿವಾದಿಯಾಗಿದ್ದರು.