ಬೆಂಗಳೂರು ಜ 21 : KPL ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ. 2019ರಲ್ಲಿ ನಡೆದಿದ್ದ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಸಮಯದಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಭಾರತೀಯ ದಂಡ ಸಂಹಿತೆಯ section 420 ಪ್ರಕಾರ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣದ ಸಂಬಂಧ ನಾಲ್ವರ ವಿರುದ್ದದ chargesheet ಹೈಕೋರ್ಟ್ ರದ್ದುಗೊಳಿಸಿದೆ.
ಕ್ರಿಕೆಟಿಗರಾದ ಅರ್ಬಾಜ್ ಖಾಜಿ, ಸಿ.ಎಂ.ಗೌತಮ್, ಬೆಳಗಾವಿ ಪ್ಯಾಂಥರ್ಸ್ ಮಾಲೀಕನಾದ ಅಲಿ ಅಶ್ವಾಕ್ ಘಾಜಿಯಾಭಾದ್ ಮೂಲದ ಬುಕ್ಕಿ ಎನ್ನಲಾದ ಅಮಿತ್ ಮಾವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಒಬ್ಬ ಆಟಗಾರ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದರೆ ಆತ ಆ ಕ್ರೀಡೆಯನ್ನು ಪ್ರೋತ್ಸಾಹಿಸುವವರಿಗೆ ಮೋಸ ಮಾಡಿದ್ದಾನೆಂಬ ಭಾವನೆ ಮೂಡುವುದು ಸಹಜ. ಆದರೆ ಈ ಸಾಮಾನ್ಯ ಭಾವನೆಯು ದಂಡ ಸಂಹಿತೆಯ ಅಡಿಯ ( 420) ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮ್ಯಾಚ್ ಫಿಕ್ಸಿಂಗ್ ಒಬ್ಬ ಆಟಗಾರನ ಅಪ್ರಾಮಾಣಿಕತೆ, ಅಶಿಸ್ತು ಹಾಗೂ ಆತನ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತದೆ. ಇದರ ವಿರುದ್ದ ಕ್ರಮ ಜರುಗಿಸಲು ಬಿಸಿಸಿಐಗೆ ಸಂಪೂರ್ಣ ಅಧಿಕಾರವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಶಿಕ್ಷರ್ಹಾ ಅಪರಾಧ ಎಂಬ ಆಧಾರದ ಮೇಲೆ ಏಫ್ಐಆರ್ಅನ್ನು ದಾಖಲಿಸಿರುವುದನ್ನು ಕೋರ್ಟ್ ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಸಿಸಿಬಿಗೆ ಚಾಟಿ ಬೀಸಿದೆ.