KSRTCಯ ಆಕ್ಸಿಜನ್ ಬಸ್ ಸೇವೆ ಯಶಸ್ವಿ ಹಿನ್ನೆಲೆ: ನಿನ್ನೆಯಿಂದ ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ

ಬೆಂಗಳೂರು, ಮೇ. 17: ಕೊರೊನಾ‌ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ವತಿಯಿಂದ ಪ್ರಾರಂಭಿಸಲಾದ ಆಕ್ಸಿಜನ್ ಬಸ್ ಸೇವೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಕೇಂದ್ರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತಿದೆ.

ಇದರ ಅಂಗವಾಗಿ ಮೇ 17ರ ಸೋಮವಾರದಿಂದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ KSRTCಯು ಚಿಕ್ಕಮಗಳೂರಿನಲ್ಲಿ ಬಸ್ಸಿನಲ್ಲೇ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಅವರು, ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಸ್ಥಳಾಭಾವದಿಂದ ರೋಗಿಗಳಿಗೆ ಅಲ್ಲಿ ಕುಳಿತು ಕಾಯುವುದಕ್ಕೂ ಕಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಉಚಿತವಾಗಿ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಆಕ್ಸಿಜನ್ ಪೂರೈಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಿರುವ ಈ KSRTC ಬಸ್ಸನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗುವುದು. ಹೊರಗಿನಿಂದ ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್ಸಿನಲ್ಲೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ ಎಂದರು.

KSRTCಯ ಈ ನೂತನ ಸೇವೆಯನ್ನು ಖಾಸಗಿ ಸಂಸ್ಥೆಗಳಾದ ನಾಯೋನಿಕ ಐ ಕೇರ್ ಟ್ರಸ್ಟ್, ಸಿಟ್ರಿಕ್ ಇಂಡಿಯಾ ಮತ್ತು ಜಿಲ್ಲಾ ಆಡಳಿತಗಳ ಸಹಯೋಗದಿಂದ ಪ್ರಾರಂಭಿಸಲಾಗುತ್ತಿದೆ. ಏಕಕಾಲಕ್ಕೆ ಒಟ್ಟು 8 ಮಂದಿ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ.

ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ ಈ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ಸನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2ರಿಂದ 4 ಗಂಟೆ ಅವಧಿಯಲ್ಲಿ ಈ ಸೌಲಭ್ಯ ದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆಯಬಹುದು. ಈ ರೀತಿಯ ವಿಶೇಷ ‘ಆಕ್ಸಿಜನ್ ಬಸ್’ ಸೇವೆಯನ್ನು ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಸಾರಿಗೆ ನಿಗಮಗಳು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತ ಆಕ್ಸಿಜನ್ ಗಾಗಿ ಜನರು ಪರಿತಪಿಸುವುದನ್ನು ತಪ್ಪಿಸಲು ಈ ಆಕ್ಸಿಜನ್ ಬಸ್ ಸೇವೆಯು ಸಂಜೀವಿನಿಯಂತೆ ವರದಾನವಾಗಲಿದೆ ಎಂದು ಸಚಿವ ಲಕ್ಷ್ಮಣ್ ಸವದಿ ಅವರು ಆಶಾವಾದ ವ್ಯಕ್ತಪಡಿಸಿದರು.

Exit mobile version