ವಿಭಿನ್ನವಾಗಿ ಶಿಳ್ಳೆ ಹೊಡೆಯುವ `ಸರಲು ಸಿಳ್ಳಾರ’ ಹಕ್ಕಿ!

Malabar whistling thrush

ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಪಕ್ಷಿಗಳಲ್ಲಿ ಸರಲು ಸಿಳ್ಳಾರವೂ(Malabar whistling thrush) ಪಕ್ಷಿ ಕೂಡ ಒಂದು. ಗಾಢ ನೀಲಿ ಬಣ್ಣದ, ಬಿಸಿಲು ಬಿದ್ದಾಗ ಕಪ್ಪು ಬಣ್ಣ ನೀಲಿಯಾಗಿ ಹೊಳೆಯುವ ಈ ಹಕ್ಕಿ, ತನ್ನ ಸಿಳ್ಳೆಯ(Whistle) ಮೂಲಕ ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ. ಅಷ್ಟೇ ಅಲ್ಲ, ತಾನು ಮರಿ ಮಾಡುವ ಕಾಲವಾದ ಈ ತಿಂಗಳುಗಳಲ್ಲಂತೂ “ಜಗತ್ತಿನ ಯಾವುದೇ ಜಂಜಡಗಳ ಸೋಂಕಿಲ್ಲದ ಬಾಲಕನೊಬ್ಬ ಜಗದೆಲ್ಲಾ ನಿರ್ಲಿಪ್ತತೆ, ಸೋಮಾರಿತನ, ಆರಾಮತನಗಳನ್ನು ಆವಾಹಿಸಿ ಕೊಂಡವನಂತೆ ದಾರಿಯಲ್ಲಿ ಹಾಡುತ್ತಾ ಸಾಗುವಂತೆ”

ನಾನಾ ಸ್ವರಗಳ ರಾಗಾಲಾಪನೆಯಿಂದ ನಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲದು! ಕಳೆದ ವಾರ ನಾನು NCF ವತಿಯಿಂದ ಆಯೋಜಿಸಲಾಗಿದ್ದ ನ್ಯಾಚುರಲಿಸ್ಟ್ ಫೀಲ್ಡ್ ಟ್ರೈನಿಂಗ್ ಗಾಗಿ ವಾಲ್ಪರೈ ನಲ್ಲಿದ್ದೆ. ಅಂದು ಬೆಳಿಗ್ಗೆ ಎಚ್ಚರವಾಗುವ ವೇಳೆಗಾಗಲೇ, ಈ ಸಿಳ್ಳಾರ ಗಾನ ಆರಂಭವಾಗಿತ್ತು. ಈ ಹಿಂದೆ ಒಂದೆರಡು ಬಾರಿ ‘ಒಂದಷ್ಟು ಕ್ಷಣಗಳ ಕಾಲ’ ಎಂಬುವಷ್ಟು ಕಾಲ ಈ ಸರಲು ಸಿಳ್ಳಾರದ ಗಾನ ಕೇಳಿದ್ದೆನಾದರೂ ಸತತವಾಗಿ ಹತ್ತಾರು ನಿಮಿಷಗಳ ಕಾಲ ಅಡೆತಡೆಯಿಲ್ಲದ ರಾಗಾಲಾಪನೆಯನ್ನು ಕೇಳಿದ್ದು ಇದೇ ಮೊದಲು.

ಇನ್ನೂ ರೋಮಾಂಚಕ ಅಥವಾ ದೈವಿಕ ಎನ್ನಬಹುದಾದ ಈ ರಾಗಾಲಾಪನೆಯಿಂದ ಒದಗಿದ ಸಂಭ್ರಮವನ್ನು ಪದಗಳಲ್ಲಿ ಹಿಡಿದಿಡುವುದು ತುಸು ಕಷ್ಟವೇ! ಹಾಗಾಗಿಯೇ ಈ ಅಪರೂಪದ ಗಳಿಕೆಯನ್ನು ಉಳಿದವರೂ ಕೂಡ ಸಾಕ್ಷೀಕರಿಸಲೆಂದು ಈ ತುಣುಕನ್ನು ಸೆರೆ ಹಿಡಿದೆ.

Exit mobile version