ಮಾವಿನ ಹಣ್ಣು ತಿನ್ನುವ ಮುನ್ನ ಈ ಅಂಶವನ್ನು ತಪ್ಪದೇ ಗಮನಿಸಿ ; ಹಣ್ಣು ಮಾಡಲು ಬಳಸ್ತಾರೆ `ಈ’ ಕೆಮಿಕಲ್!

Mangoes

ಮಾವಿನ ಹಣ್ಣು(Mangoes) ಇಷ್ಟ ಇಲ್ಲ ಎಂದು ಹೇಳುವವರು ಯಾರಾದರೂ ಇದ್ದಾರಾ? ಖಂಡಿತ ಇಲ್ಲ. ಮಾವಿನ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಅದಕ್ಕೆ ಭಾರತದಲ್ಲಿ ಹಣ್ಣುಗಳ ರಾಜ ಮಾವು ಎಂದೇ ಕರೆಯುತ್ತಾರೆ. ಆದರೆ ನೀವು ರುಚಿಯೆಂದು ತಿನ್ನುವ ಮಾವು ಎಷ್ಟು ನೈಜ ಎಂಬುದರ ಬಗ್ಗೆ ಯೋಚಿಸಿದ್ದೀರಾ?

ಅದರಲ್ಲಿ ಸಾಕಷ್ಟು ಪ್ರಮಾಣದ ರಾಸಾಯನಿಕವನ್ನು(Chemicals) ಸಿಂಪಡಿಸಲಾಗುತ್ತದೆ. ಈ ರಾಸಾಯನಿಕಗಳಿಂದ ಕ್ಯಾನ್ಸರ್‌(Cancer) ಬರೋ ಸಾಧ್ಯತೆ ಇರುತ್ತದೆ ಎನ್ನುವ ವಿಷಯ ನಿಮಗೆ ತಿಳಿದಿರಲಿ.
ಹೌದು, ಮಾವಿನ ಕಾಯಿಯನ್ನು ವೇಗವಾಗಿ ಮಾಗಿಸಿ ಹಣ್ಣಾಗಿಸುವ ಸಲುವಾಗಿ “ಕ್ಯಾಲ್ಸಿಯಂ ಕಾರ್ಬೈಡ್‌(Calcium Carbide) ನಂತಹ ರಾಸಾಯನಿಕಗಳ ಬಳಕೆ ಸ್ವಚ್ಛಂದವಾಗಿ ನಡೆಯುತ್ತಿರುವ ಪರಿಣಾಮ, ಈ ರಾಸಾಯನಿಕ ವಿಷವು ನೇರವಾಗಿ ಗ್ರಾಹಕರ ಹೊಟ್ಟೆ ಸೇರುತ್ತಿದೆ. ಸರ್ಕಾರ ಈ ರಾಸಾಯನಿಕಗಳ ಬಳಕೆ ಮೇಲೆ ನಿಷೇಧ ಹೇರಿದ್ದರು ಕೂಡ ಮಾರುಕಟ್ಟೆಯಲ್ಲಿ ಈ ತಂತ್ರ ಕಣ್ಮರೆಯಲ್ಲಿ ನಡೆಯುತ್ತಲೇ ಇದೆ.


ಅಷ್ಟಕ್ಕೂ ಹೀಗೆ ಕೆಮಿಕಲ್ಸ್ ನಿಂದ ಮಾವನ್ನು ಹಣ್ಣು ಮಾಡುವಷ್ಟು ಆತುರ ಏಕೆ ಎಂದು ನೋಡುವುದಾದರೆ, ಬೇಸಿಗೆ ಋತುವಿನ ಆರಂಭದಲ್ಲಿ ಹಣ್ಣಿನ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಕೆಲವು ವರ್ತಕರು ಲಾಭ ಗಳಿಕೆಯ ಸಲುವಾಗಿ ಕಾಯಿಯನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡುತ್ತಾರೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹಣ್ಣಿನ ಬೆಲೆ ರೂ.150–200 ರವರೆಗೂ ಇರುತ್ತದೆ. ಮಾವು ಋತುವಿನ ಅಂತ್ಯಕ್ಕೆ ಇದು 80–100 ರೂ.ಗೆ ಇಳಿಯುತ್ತದೆ. ಹೀಗಾಗಿ ಹೆಚ್ಚಿನ ಲಾಭದ ಆಸೆಗೆ ಕಾಯಿಯ ಹಂತದಲ್ಲಿಯೇ ಮಾವನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡಲಾಗುತ್ತದೆ.

ಹೀಗೆ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ ಮತ್ತು ಇಥಲಿನ್ ಅನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ಕಾಯನ್ನು ಕೃತಕವಾಗಿ ಮಾಗಿಸಿ ಅದಕ್ಕೆ ನೈಜ ಹಣ್ಣಿನ ಬಣ್ಣ ನೀಡಲು ಪ್ರಯತ್ನಿಸುತ್ತದೆ. ಇದರೊಟ್ಟಿಗೆ ಹಣ್ಣಿನಲ್ಲಿ ವಿಷಕಾರಿ ಅಂಶವೂ ಸೇರ್ಪಡೆ ಆಗುತ್ತದೆ ಎಂದು ಸವಿವರವಾಗಿ ಮಾಹಿತಿ ನೀಡುತ್ತಾರೆ ಮಾರುಕಟ್ಟೆ ತಜ್ಞರು.
ಕೇವಲ ಮಾವು ಅಷ್ಟೇ ಅಲ್ಲದೇ, ಬಾಳೆ, ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಈ ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ಬಳಸಲಾಗುತ್ತಿದೆ.

ಭಾರತ ಸೇರಿದಂತೆ ಹಲವು ದೇಶಗಳು ಇದರ ಬಳಕೆಗೆ ನಿಷೇಧ ಹೇರಿವೆ. ಆದರೆ ಮಾರುಕಟ್ಟೆಯಲ್ಲಿ ಇಂದಿಗೂ ಮುಕ್ತವಾಗಿ, ಈ ರಾಸಾಯನಿಕದ ಮಾರಾಟ ನಡೆಯುತ್ತಲೇ ಇದೆ. ಈ ಕಾರ್ಬೈಡ್‌, ಆರ್ಸೆನಿಕ್‌ ಮತ್ತು ಫಾಸ್ಪರಸ್‌ನಂತಹ ರಾಸಾಯನಿಕಗಳನ್ನು ಒಳಗೊಂಡಿದ್ದು, ಇವು ಮಾನವ ದೇಹದ ಅಂಗಾಂಗಳಿಗೆ ಮೃತ್ಯುರೂಪಿಯಾಗಿ ಪರಿಣಮಿಸುತ್ತವೆ. ಮುಖ್ಯವಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ತಂದೊಡ್ಡಬಲ್ಲವು ಎಂಬುದನ್ನು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಧೃಡಪಡಿಸಿವೆ.


ಹಣ್ಣನ್ನು ಮಾಗಿಸಲು ನೈಸರ್ಗಿಕವಾದ ಹಲವು ವಿಧಾನಗಳಿವೆ, ಅದನ್ನು ಅನುಸರಿಸುವುದು ಸೂಕ್ತ. ಯಥಿಲೀನ್‌ ಮೊದಲಾದ ಹಾನಿಕಾರಕವಲ್ಲದ ದ್ರಾವಣಗಳನ್ನು ಬಳಸಿ ಹಣ್ಣನ್ನು ಮಾಗಿಸಬಹುದು. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿರುತ್ತದೆ. ಯಾವುದೇ ಹಣ್ಣನ್ನು ತಿನ್ನುವ ಮುನ್ನ ಉಪ್ಪು ಬೆರೆಸಿದ ನೀರಿನಲ್ಲಿ ಒಂದೆರಡು ನಿಮಿಷ ಹಾಕಿಟ್ಟು ನಂತರ ಚೆನ್ನಾಗಿ ತೊಳೆದ ಬಳಿಕವಷ್ಟೇ ತಿನ್ನಬೇಕು ಎನ್ನುವುದು ವೈದ್ಯರು ಹಾಗೂ ತಜ್ಞರು ಸಲಹೆ ನೀಡುತ್ತಾರೆ.

Exit mobile version