ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಿದ್ರೆ ದಂಡ : ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ!

france

ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್(Hijab) ಸಂಘರ್ಷ(Conflict) ಇದೀಗ ಯೂರೋಪಿನ(Europe) ಪ್ರಮುಖ ದೇಶ ಫ್ರಾನ್ಸ್‍ಗೂ(France) ಕಾಲಿಟ್ಟಿದೆ. ಸದ್ಯ ಫ್ರಾನ್ಸ್‍ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಅಲ್ಲಿಯ ಪ್ರಮುಖ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್ ಕೊನೆ ಕ್ಷಣದಲ್ಲಿ ಮಾಡಿರುವ ಘೋಷಣೆ ಇದೀಗ ಎಲ್ಲೆಡೆ ವಿವಾದದ ಕಿಡಿಹೊತ್ತಿಸಿದೆ.

ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಶಿರವಸ್ತ್ರ ಧರಿಸಬಾರದು. ಹಾಗೇ ಧರಿಸಿದ್ರೆ ದಂಡ ವಿಧಿಸುವ ಕಾನೂನು ರೂಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ಅಧ್ಯಕ್ಷೀಯ ಚುನಾವಣೆಯ ಮತದಾನಕ್ಕೆ ಕೇವಲ ಮೂರು ದಿನಗಳಿದ್ದು, ಮರೀನ್ ಲೆ ಪೆನ್ ನೀಡಿರುವ ಈ ಹೇಳಿಕೆಯಿಂದ ಫ್ರಾನ್ಸ್‍ನಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳು ಸೃಷ್ಟಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮೂಲಭೂತವಾದದಿಂದ ಫ್ರಾನ್ಸ್ ಸಾಕಷ್ಟು ಸಂಕಷ್ಟ ಅನುಭವಿಸಿದೆ.

ಅನೇಕ ಉಗ್ರ ದಾಳಿಗಳು ಫ್ರಾನ್ಸ್‍ನಲ್ಲಿ ನಡೆದಿವೆ. ಈ ಎಲ್ಲ ಕಾರಣಗಳಿಂದ ಫ್ರಾನ್ಸ್‍ನ್ನು ರಕ್ಷಿಸಬೇಕಾದರೆ ಮುಸ್ಲಿಂ ಮೂಲಭೂತವಾದಕ್ಕೆ ಕಡಿವಾಣ ಹಾಕಬೇಕು ಎಂಬುದು ಫ್ರಾನ್ಸ್‍ನ ಬಲಪಂಥೀಯರ ವಾದ. ಹೀಗಾಗಿಯೇ ಫ್ರಾನ್ಸ್ ಬೇರೆ ದೇಶಗಳ ಮುಸ್ಲಿಂ ಧಾರ್ಮಿಕ ಗುರುಗಳ ಮೇಲೆ ನಿರ್ಬಂಧ ಸೇರಿದಂತೆ ಅನೇಕ ಹೊಸ ಕಾನೂನುಗಳನ್ನು ಮುಸ್ಲಿಂ ಮೂಲಭೂತವಾದವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರೂಪಿಸಿದೆ. ಆದರೆ ಇದೀಗ ಬಲಪಂಥೀಯ ನಾಯಕಿಯಾದ ಮರೀನ್ ನೀಡಿರುವ ಹೇಳಿಕೆಯನ್ನು ಫ್ರಾನ್ಸ್ ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸಿದೆ.

ಇನ್ನು ಆರ್‍ಟಿಎಲ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮರೀನ್ ಲೆ ಪೆನ್ ಸಾರ್ವಜನಿಕ ಸ್ಥಳಗಳಲ್ಲಿ ಶಿರವಸ್ತ್ರವನ್ನು ಹೇಗೆ ನಿಷೇಧಿಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಇನ್ನು ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಸೂಚಿಸುವ ಮತ್ತು ಸಾರ್ವಜನಿಕವಾಗಿ ಮುಖವನ್ನು ಮುಚ್ಚಿಕೊಳ್ಳುವಂತ ಶಿರವಸ್ತ್ರವನ್ನು ನಿಷೇಧಿಸುವ ಕುರಿತು ಈ ಹಿಂದಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಾನು ಶ್ರಮಿಸುವುದಾಗಿ ಮರೀನ್ ಹೇಳಿದ್ದಾರೆ.


ಸದ್ಯ ನಡೆಯುತ್ತಿರುವ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತೇ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ. ಮ್ಯಾಕ್ರನ್ ಕೂಡಾ ಬಲಪಂಥೀಯ ಚಿಂತನೆಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ಹೀಗಾಗಿ ಮರೀನ್ ಲೆ ಪೆನ್ ಮತ್ತು ಮ್ಯಾಕ್ರನ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇನ್ನೊಂದೆಡೆ ಎಡಪಂಥೀಯ ನಾಯಕ ಜಿನ್-ಲುಕ್ ಮೆಲೆನ್‍ಚೋನ್ ಮೂರನೇಯ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.

Exit mobile version