ಪ್ರತಿಷ್ಠಿತ ‘ಮಾಸ್ಟರ್ ಶೆಫ್ ಇಂಡಿಯಾ’ ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ಮಂಗಳೂರಿನ ಮುಹಮ್ಮದ್ ಆಶಿಕ್

Mangalore: ಮುಂಬೈಯಲ್ಲಿ (Mumbai) ಆಯೋಜಿಸಿದ್ದ ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್‘ನ (Sony Live’ OTT Platform) ಮಾಸ್ಟರ್ ಶೆಫ್ ಇಂಡಿಯಾ ಸ್ಪರ್ಧೆಯಲ್ಲಿ ಮಂಗಳೂರಿನ 24ರ ಹರೆಯದ ಯುವಕ ಮುಹಮ್ಮದ್ ಆಶಿಕ್ ವಿಜೇತರಾಗಿದ್ದಾರೆ.

ಶುಕ್ರವಾರ ಸ್ಪರ್ಧೆಯ ಫೈನಲ್ (Final) ಸಂಚಿಕೆ ಪ್ರಸಾರವಾಗಿದ್ದು, ಅದರಲ್ಲಿ ಆಶಿಕ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಫೈನಲ್ ತಲುಪಿದ ರುಖ್ಸಾರ್ ಸಯೀದ್ (Rukhsar Saeed), ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, ‘ಮಾಸ್ಟರ್ ಶೆಫ್ ಇಂಡಿಯಾ’ (MasterChef India) ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾದ ಹಿರಿಮೆಗೆ ದ.ಕ.ಜಿಲ್ಲೆಯ ಯುವಕನೊಬ್ಬ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಪ್ರಪ್ರಥಮ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಯೂ ಆಶಿಕ್ ಅವರದ್ದು. ನಗರದ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ (Abdul Khader-Saramma) ದಂಪತಿಯ ಏಕೈಕ ಪುತ್ರನಾಗಿರುವ ಮುಹಮ್ಮದ್ ಆಶಿಕ್‌ (Muhammad Ashiq) ಗೆ ನಾನ ವಿಧದದ ಅಡುಗೆ ತಯಾರಿಯಲ್ಲಿ ಸಣ್ಣ ವಯಸ್ಸಿನಲ್ಲೇ ಆಸಕ್ತಿಯಿತ್ತು.

ಹೋಟೆಲ್ ಮ್ಯಾನೇಜ್ ಮೆಂಟ್ (Hotel Management) ಕಲಿಯಬೇಕೆಂಬ ಬಯಕೆಯಿತ್ತಾದರೂ ಮನೆಯ ಆರ್ಥಿಕ ಸ್ಥಿತಿಗತಿ ಅದಕ್ಕೆ ಅವಕಾಶ ನೀಡಲಿಲ್ಲ. ಆರ್ಥಿಕ ಸಮಸ್ಯೆ ಪರಿಹರಿಸಿಕೊಂಡು ಸಾಧಿಸುವ ಛಲ ಆಶಿಕ್ ಅವರಲ್ಲಿತ್ತು. ಹಾಗಾಗಿ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲೇ ಶುಚಿ-ರುಚಿಯಾದ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡಲಾರಂಭಿಸಿದರು.

ಅದರ ಜೊತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ‘ಸ್ಟಾಲ್’ (Stall) ಹಾಕಿ ವ್ಯಾಪಾರ ಮಾಡುತ್ತಿದ್ದರು. ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ನಾನಾ ಬಗೆಯ ಪಾನೀಯಗಳನ್ನು ಕೂಡ ಮಾರಾಟ ಮಾಡತೊಡಗಿದರು. ನಗರದ ಕಾಶಿಯಾ ಮತ್ತು ರೊಝಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತ ಮುಹಮ್ಮದ್ ಆಶಿಕ್ ದ್ವಿತೀಯ ಪಿಯುಸಿ ತರಗತಿ ತೇರ್ಗಡೆ ಹೊಂದಿದ ಬಳಿಕ ಶಿಕ್ಷಣ ಮುಂದುವರಿಸಲಾಗದೆ ಮಂಗಳೂರಿನ ಫಿಝಾ ಮಾಲ್‌ನ ರೆಡಿಮೇಡ್ ಶಾಪ್ ಒಂದರಲ್ಲಿ ಸೇಲ್ಸ್ ಮ್ಯಾನ್ (Sales Man) ಆಗಿ ಕೆಲಸ ಮಾಡತೊಡಗಿದರು.

ಆದರೆ ಮನಸ್ಸೆಲ್ಲಾ ಅಹಾರ ತಯಾರಿ ಅಥವಾ ಅಡುಗೆ ಮನೆಯಲ್ಲೇ ಇತ್ತು. ಈತನ ಪಾಕ ಕಲೆಯನ್ನು ಗುರುತಿಸಿದ ಸಂಬಂಧಿಕರೇ ಆದ ಬಂಟ್ವಾಳದ (Bantwala) ಮುಹಮ್ಮದ್ ಅಲಿ ಎಂಬವರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು. ಅದರಂತೆ ತನ್ನ 20ರ ಹರೆಯದಲ್ಲೇ ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ (Kulki Hub) ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ‘ ಶೆಫ್ ’ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ಶ್ರಮಿಸಿದರು.

ಹಾಗೇ ‘ ಶೆಫ್’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಹೈದರಾಬಾದ್ (Hyderabad), ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ನಡೆದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಕಳೆದ ಬಾರಿ ‘ ‘ಸೋನಿ ಟಿವಿ’ ಸಂಸ್ಥೆಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡಲಿಲ್ಲ. ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಛಲಬಿಡದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.

ದೇಶಾದ್ಯಂತ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ (Bengaluru) ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ನಂತರ ಹಿಂದಿರುಗಿ ನೋಡದ ಅವರು ಇದೀಗ ‘ಮಾಸ್ಟರ್ ಶೆಫ್ ಇಂಡಿಯಾ’ ಗೆಲುವನ್ನು ಮುಡಿಗೇರಿಸಿಕೊಂಡಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version