‘ನನಗೆ ಮಂಡ್ಯ, ಮಗನಿಗೆ ಮದ್ದೂರು ಟಿಕೆಟ್’ ; ಬಿಜೆಪಿ ಸೇರಲು ಸುಮಲತಾ ಲೆಕ್ಕಾಚಾರ!

MP

ಪಕ್ಷೇತರ ಸಂಸದೆ(MP) ಸುಮಲತಾ ಅಂಬರೀಶ್(Sumalatha Ambareesh) ಅವರು ಮುಂದಿನ ಲೋಕಸಭಾ ಚುನಾವಣೆ(Loksabha Election) ದೃಷ್ಟಿಯಿಂದ ಬಿಜೆಪಿ(BJP) ಸೇರಲು ಸಿದ್ದತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

2019ರಲ್ಲಿ ಕಾಂಗ್ರೆಸ್-ಜೆಡಿಎಸ್(Congress-JDS) ಮೈತ್ರಿಕೂಟದ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ರು. ಆದರೆ ಈ ಬಾರಿ ಯಾವುದೇ ಪಕ್ಷದ ಬೆಂಬಲವಿಲ್ಲದೇ ಪಕ್ಷೇತರಳಾಗಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದನ್ನು ಅರಿತಿರುವ ಸುಮಲತಾ ಅವರು, ಬಿಜೆಪಿ ಸೇರಲು ಸಿದ್ದತೆ ನಡೆಸಿದ್ದು ಕೆಲ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಸುಮಲತಾ ಅವರನ್ನು ಬೆಂಬಲಿಸಿದ್ದರು. ಆಗ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ತೆರೆಮರೆಯಲ್ಲಿ ಕಾಂಗ್ರೆಸ್ ಕೆಲಸ ಮಾಡಿತ್ತು. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಭಿನ್ನವಾಗಿರಲಿದೆ. ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಹಾಕಲಿದೆ.

ಜೆಡಿಎಸ್ ಕೂಡಾ ಅಭ್ಯರ್ಥಿ ಹಾಕಲಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾದ್ರೆ ಗೆಲುವು ಸಾಧ್ಯವಿಲ್ಲ ಎನ್ನುವುದು ಸುಮಲತಾ ಅವರ ಲೆಕ್ಕಾಚಾರ. ಹೀಗಾಗಿ ಮಂಡ್ಯದಲ್ಲಿ ಪ್ರಬಲ ನೆಲೆ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಸೇರಲು ಸುಮಲತಾ ಅಂಬರೀಶ್ ಅವರು ಮುಂದಾಗಿದ್ದರು. ಆದರೆ ಸುಮಲತಾ ಅವರ ಕೆಲ ಷರತ್ತುಗಳಿಗೆ ಕಾಂಗ್ರೆಸ್ ‘ನೋ’ ಎಂದಿದ್ದು, ಹೀಗಾಗಿ ಅನಿವಾರ್ಯವಾಗಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಹಾದಿ ಹಿಡಿದಿದ್ದಾರೆ.

ಸುಮಲತಾ ತಾವು ಕಾಂಗ್ರೆಸ್ ಸೇರಲು ತಮ್ಮ ಮಗನಿಗೆ ಮದ್ದೂರು ಕ್ಷೇತ್ರದ ಟಿಕೆಟ್ ಬಯಸಿದ್ದರು ಎನ್ನಲಾಗಿದೆ. ಆದರೆ ಮಾಜಿ ಸಿಎಂ ಎಸ್. ಎಂ ಕೃಷ್ಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೆಂಟರಾದ ನಂತರ ಮದ್ದೂರು ಟಿಕೆಟ್ ಎಸ್.ಎಂ ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್‍ಗೆ ಪಕ್ಕಾ ಆಗಿದೆ. ಡಿ.ಕೆ ಶಿವಕುಮಾರ್ ಮದ್ದೂರು ಟಿಕೆಟ್ ನೀಡುವ ಭರವಸೆಯನ್ನು ಗುರುಚರಣ್‍ಗೆ ನೀಡಿದ್ದಾರೆ. ಹೀಗಾಗಿ ಮಗನ ರಾಜಕೀಯ ಭವಿಷ್ಯಕ್ಕಾಗಿ ಸುಮಲತಾ ಅವರು ಕಾಂಗ್ರೆಸ್‍ನಿಂದ ದೂರ ಸರಿದಿದ್ದಾರೆ.

ಇನ್ನು ಬಿಜೆಪಿ ಸೇರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್‍ರನ್ನು ಕಣಕ್ಕಿಳಿಸಲು ಸುಮಲತಾ ಅವರು ಮುಂದಾಗಿದ್ದಾರೆ. ಈಗಾಗಲೇ ಮದ್ದೂರಿನಲ್ಲಿ ಅನೇಕ ಸಭೆಗಳನ್ನು ನಡೆಸುತ್ತಿದ್ದು, ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Exit mobile version