ಬಿಬಿಎಂಪಿ ಮಾಜಿ ಪಾಲಿಕೆ‌ ಸದಸ್ಯೆ ಕೊಲೆ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಬೆಂಗಳೂರು,ಜೂ.25: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದ ಕಟ್ಟೆ ಬಳಿ ಇಬ್ಬರು ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ  ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ರೇಖಾ ಕದಿರೇಶ್ ಹತ್ಯೆ ನಡೆದಿದ್ದು ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಗೆ ಆರಂಭದಲ್ಲಿ ಪೊಲೀಸರು ಶರಣಾಗುವಂತೆ ಹೇಳಿದರೂ ಕೇಳಲಿಲ್ಲ. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದು, ಆಗ ಅನಿವಾರ್ಯವಾಗಿ ಇನ್ಸ್ ಪೆಕ್ಟರ್ ಗಳಾದ ಶಿವಾನಂದ್ ಮತ್ತು ಚಿದಾನಂದ್ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್, ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ  ಅನುಮಾನಿತರನ್ನ ಪಟ್ಟಿ ಮಾಡಲಾಗಿತ್ತು. ಹೀಗಾಗಿ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಪೀಟರ್​, ಸೂರ್ಯನನ್ನು ಬಂಧಿಸಲಾಗಿದೆ.‌ ಆದರೆ ಬಂಧನ ವೇಳೆ ಇಬ್ಬರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪರಿಣಾಮ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Exit mobile version