ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 15 ದಿನಗಳ ಅಂತರದಲ್ಲಿ ಮೂರನೇ ಬಾರಿ ಭೂಕುಸಿತ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆ ಸುರಿದಿತ್ತು. ನಂತರ ಚಾಮುಂಡಿ ಬೆಟ್ಟದಲ್ಲಿ ಸಂಭವಿಸಿದ್ದ ಭೂಕುಸಿತದ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 15 ದಿನಗಳ ಅಂತರದಲ್ಲಿ ಮೂರನೇ ಬಾರಿ ಭೂಕುಸಿತ ಉಂಟಾಗಿದೆ.

ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆಯಲ್ಲಿ ದೊಡ್ಡ ಬಿರುಕು‌ ಬಿಟ್ಟಿದ್ದ ರಸ್ತೆ ಕುಸಿದಿತ್ತು. ಇದಾದ ನಂತರದಲ್ಲಿ ಗುರುವಾರ ರಾತ್ರಿ ಸೇರಿದಂತೆ ಒಟ್ಟು ಮೂರು ಬಾರಿ ಬೆಟ್ಟದಲ್ಲಿ ಭೂ ಕುಸಿತ ಸಂಭವಿಸಿದೆ. ಹೀಗಾಗಿ ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ತಜ್ಞರು  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ತಜ್ಞರ ಸಲಹಾ ವರದಿಯಂತೆ ಪಿಡಬ್ಲ್ಯೂಡಿ ಇಲಾಖೆ ದುರಸ್ತಿ ಕಾರ್ಯ ನಡೆಸಲಿದ್ದು, ಮಣ್ಣಿನ ಸಾಂದ್ರತೆ, ಹೊಸ ತಂತ್ರಜ್ಞಾನದೊಂದಿಗೆ ಕೈಗೊಳ್ಳಬಹುದಾದ ದುರಸ್ಥಿ ಕಾರ್ಯ ಕುರಿತಂತೆ ತಜ್ಞ ಭೂ ವಿಜ್ಞಾನಿಗಳು ವರದಿ ನೀಡಲಿದ್ದಾರೆ.

ಈ ನಡುವೆ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ತಪ್ಪಲಿನ ಪಿಂಜರಾಪೋಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ಮಳೆಯ ಅಬ್ಬರ ಹೀಗೆ ಮುಂದುವರಿದರೆ, ಪಿಂಜರಾಪೋಲ್‌ನಲ್ಲಿರುವ ಜಾನುವಾರುಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಪಿಂಜರಾಪೋಲ್ ನಿರ್ವಹಣೆ ಮಾಡುತ್ತಿರುವವರಲ್ಲಿ ಆತಂಕ ಮೂಡಿಸಿದೆ.

ಇನ್ನು ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲಿ ಭೂಕುಸಿತ ಮುಂದುವರಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.‌ ಸೋಮಶೇಖರ್, ಶೀಘ್ರದಲ್ಲೇ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಸ್ಥಳಕ್ಕೆ ಭೇಟಿ‌ ನೀಡುತ್ತಾರೆ. ಪೂರ್ಣ ಪ್ರಮಾಣದಲ್ಲಿ ಆ ರಸ್ತೆಯನ್ನು ದುರಸ್ತಿ‌ ಮಾಡಲು ಕ್ರಮ‌ ಕೈಗೊಳುತ್ತೇವೆ. ಮಳೆ ಸಂಪೂರ್ಣವಾಗಿ ನಿಲ್ಲುವವರೆಗೂ ಶಾಶ್ವತ ಕಾಮಗಾರಿ‌ ಕಷ್ಟ. ಕಾಮಗಾರಿಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತೇವೆ ಎಂದರು.

 

Exit mobile version