ಮೈಸೂರು ಸಿಟಿ ಬಸ್ಸಿನಲ್ಲಿ ಅಚ್ಚ ಕನ್ನಡದಲ್ಲಿ ಸ್ಟಾಪ್ ಕೊಡುವ ನಿರ್ವಾಹಕ!

‘ಯಾರ್ರೀ ಪ್ರಾದೇಶಿಕ ಸಾರಿಗೆ ಕಚೇರಿ(RTO Stop) ಇಳಿಯೋರು……..’ ಎಂದು ಕಂಡಕ್ಟರ್(Conductor) ಕೂಗಿದಾಗ ಪುಸ್ತಕ ಓದುತ್ತಿದ್ದವನು ‘ಇದ್ಯಾವ stop?’ ಎಂಬಂತೆ ಕತ್ತೆತ್ತಿ ನೋಡಿದ. ಅದು RTO ಸ್ಟಾಪ್ ಆಗಿತ್ತು. ಮತ್ತೆ ಕೂಗುವಾಗ ‘ಯಾರ್ರೀ RTO’ ಎನ್ನುತ್ತಾರೆ ಎಂದು ನಿರೀಕ್ಷಿಸಿದೆ.

ಇಲ್ಲ, ಎರಡು, ಮೂರನೆಯ ಬಾರಿಯೂ ಯಾರ್ರೀ ‘ಪ್ರಾದೇಶಿಕ ಸಾರಿಗೆ ಕಚೇರಿ’ ಎಂದೇ ಕೂಗಿದರು! ಮುಂದಿನ ಸ್ಟಾಪ್ ಗಳಿಗೆ ಏನೆನ್ನಬಹುದು ಎಂದು ನಿರೀಕ್ಷಿಸತೊಡಗಿದೆ. ಯಾರ್ರೀ ‘ಸಿದ್ದಪ್ಪ ಚೌಕ’(Siddappa Square) ಎಂದರು. ‘ಸಂಸ್ಕೃತ ಪಾಠಶಾಲೆ ಇಳಿಯುವವರು ಬನ್ನಿ’ ಎಂದರು. ಮುಂದಿನ, ಜನಮಾನಸದಲ್ಲಿ ಆರ್ ಗೇಟ್ ಎಂಬ ಅಪಭ್ರಂಶವಾಗಿ ಪ್ರಸಿದ್ಧವಾದ ಹಾರ್ಡಿಂಗ್ ಸರ್ಕಲ್ ಗೆ ಏನೆನ್ನಬಹುದು ಎಂಬ ಕುತೂಹಲ ಜೋರಾಯಿತು. ಬಹುಷಃ ಹಾರ್ಡಿಂಗ್ ವೃತ್ತ(Hardinge Circle) ಎನ್ನಬಹುದು ಎಂದೇ ಕಾಯತೊಡಗಿದೆ.

ಆದರೆ ಕಂಡಕ್ಟರ್ ಹೇಳಿದ್ದು ‘ಜಯಚಾಮರಾಜೇಂದ್ರ ಒಡೆಯರ್ ವೃತ್ತ(Jayachamrajendra Circle) ಇಳಿಯುವವರು ಬನ್ನಿ’ ಎಂದು! ಅನೇಕರಂತೆ ನನಗೂ ಗೊತ್ತಾಗಲಿಲ್ಲ. ‘ಯಾವುದಾದರು ಬೇರೆ ಊರಿಗೇನಾದರೂ ಬಂದಿದ್ದೇವಾ?’ಎಂಬಂತೆ ಕೆಲವರು ಕಿಟಕಿ ಮೂಲಕ ದೃಷ್ಟಿ ಹಾಯಿಸಿದರೆ, ಮತ್ತೆ ಕೆಲವರು ‘ಆರ್ ಗೇಟಾ ಕಂಡಕ್ಟರೇ?’ ಎಂದು ಸ್ಪಷ್ಟಪಡಿಸಿಕೊಂಡರು. ಹೌದು ಎಂದ ಅವರು ಮುಂದುವರಿದು ‘ಕೇಂದ್ರ ಬಸ್ ನಿಲ್ದಾಣಕ್ಕೆ(Suburb Bus Stand) ಹೋಗುವವರೂ ಇಲ್ಲೇ ಇಳಿಯಿರಿ’ ಎಂದು ಹೇಳುವ ಹೊತ್ತಿಗೆ ಆತನನ್ನೇ ವಿಚಿತ್ರವಾಗಿ ನೋಡಿಕೊಂಡು ಇಳಿಯುವವರ ಸಂಖ್ಯೆ ಬೆಳೆದಿತ್ತು.

ಬಸ್ ಇಳಿಯುತ್ತಿದ್ದ ಕಾಲೇಜಿನ ಹುಡುಗಿಯೊಬ್ಬಳು ‘ಬಾಯ್ ಕಣೆ’ ಎಂದು ತನ್ನ ಗೆಳತಿಗೆ ಹೇಳಿದ್ದಕ್ಕೆ ‘ಕನ್ನಡದಲ್ಲಿ ಬಾಯ್ ಹೇಳೇ, ಇಲ್ಲಾಂದ್ರೆ ಕನ್ನಡದ ಕಂಡಕ್ಟರ್ಗೆ ಬೇಜಾರಾಗುತ್ತೆ’ ಎಂದಾಕೆ ಕಿಚಾಯಿಸಿದ್ದು ಎಲ್ಲರಿಗೂ ಕೇಳಿಸಿ ಒಂದಿಬ್ಬರು ಕಿಸಕ್ ಎಂದರೂ, ಅದು ಕಂಡಕ್ಟರ್ ನ ಮುಖ ಭಾವದಲ್ಲಿ ಯಾವ ಬದಲಾವಣೆಯನ್ನೂ ತರಲಿಲ್ಲ. ನಾನು ಅಲ್ಲೇ ಇಳಿಯಬೇಕಾಗಿದ್ದರಿಂದ ಗಡಿಬಿಡಿ ಮಾಡುತ್ತ ಬಾಗಿಲ ಕಡೆಗೆ ನಡೆದೆ. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರು ಕೇಳಲು ಮತ್ತು ಒಂದು ಅವಸರದ ಫೋಟೋ ತೆಗೆದುಕೊಳ್ಳಲು, ಜೊತೆಗೆ ‘ಕನ್ನಡದಲ್ಲೇ ಮಾತಾಡ್ತಾ ಇರೋದಕ್ಕೆ ಧನ್ಯವಾದಗಳು ಸರ್’ ಅನ್ನಲು ಮರೆಯಲಿಲ್ಲ.

ಇಳಿಯುತ್ತಿದ್ದ ಕೆಲವರು ನನ್ನನ್ನೂ ವಿಚಿತ್ರವಾಗಿ ನೋಡಿದರು! ಅಂದ ಹಾಗೆ, ಇವರು ತ್ಯಾಗರಾಜ್(Tyagaraj), ಮೈಸೂರು ಸಿಟಿ ಬಸ್ ಸರ್ವಿಸ್ ನಲ್ಲಿ ನಿರ್ವಾಹಕರು. ಕನ್ನಡಿಗರದ್ದೇ ಕುಹಕಗಳಿಗೆ ಒಂದು ಚೂರೂ ಬೇಸರಿಸದೆ, ಮೆಚ್ಚಿಕೊಂಡವರ ಮಾತಿಗೆ ಹಿಗ್ಗದೆ, ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಮಾತಿನಿಂದಾಗಿ ಅನೇಕರಿಗೆ ತಾವು ವಿಚಿತ್ರ ಪ್ರಾಣಿಯಂತೆ ಕಾಣುವುದು ಖಚಿತವಿದ್ದರೂ ಒಂದು ಚೂರೂ ತಲೆಕೆಡಿಸಿಕೊಳ್ಳದೆ, ತಮಗೆ ತಿಳಿದಂತೆ ಕನ್ನಡ ಸೇವೆ ಮಾಡುತ್ತಿದ್ದಾರೆ. Circle, square ಗಳನ್ನಷ್ಟೇ ಕನ್ನಡೀಕರಿಸದೆ, ಹಾರ್ಡಿಂಗ್ ಸರ್ಕಲ್ ಗೆ ಬದಲಾಗಿ ‘ಜಯಚಾಮರಾಜೇಂದ್ರ ಒಡೆಯರ್ ವೃತ್ತ’ ಎಂದು ಬಳಸಿದ ನಿರ್ವಾಹಕ ತ್ಯಾಗರಾಜ್ ಮಹಾಶಯರಿಗೆ ನನ್ನದೊಂದು ನಮಸ್ಕಾರ!

ಮೈಸೂರಿನ ಸಿಟಿ ಬಸ್ಸಿನಲ್ಲಿ(Mysuru City Bus) ನೀವು ಪ್ರಯಾಣಿಸುವವರಾದರೆ ಈ ವ್ಯಕ್ತಿಯನ್ನು ನೀವೀಗಾಗಲೇ ಭೇಟಿಯಾಗಿರಬಹುದು, ಅಥವಾ ಮುಂದೆ ಭೇಟಿಯಾಗಬಹುದು. ಭೇಟಿಯಾಗಲೆಂಬ ಆಶಯ ನನ್ನದು.

ಮಾಹಿತಿ : ನಟರಾಜ್ ಶೀಲಾ/ ಕನ್ನಡ ಕಂಪು

Exit mobile version