ಜೀವನದಲ್ಲಿ ಒಮ್ಮೆಯಾದರೂ ನಾವೆಲ್ಲರೂ ಉಗುರು ಕಚ್ಚಿರುತ್ತೇವೆ, ಅದರಲ್ಲೂ ಬಾಲ್ಯದಲ್ಲಿ ಈ ಅಭ್ಯಾಸ ಅತಿಯಾಗಿರುತ್ತದೆ. ದೊಡ್ಡವರಾಗುತ್ತಿದ್ದಂತೆ ಈ ಅಭ್ಯಾಸವು ಕಡಿಮೆಯಾದರೂ, ಕೆಲವರಲ್ಲಿ ದೊಡ್ಡವರಾದ ಬಳಿಕ ಕೂಡ ಉಗುರು ಕಚ್ಚುವಂತಹ ಅಭ್ಯಾಸ ಮುಂದುವರಿಯುತ್ತದೆ. ಇದು ಅಸಹ್ಯವಾಗಿ ಕಾಣಿಸುತ್ತೆ ಹೊರತು, ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.

ಯಾಕೆಂದರೆ ಇದು ಕೂಡ ಒಂದು ಗಂಭೀರವಾಗಿ ಚಿಂತಿಸಬೇಕಾದ ಸಮಸ್ಯೆಯಾಗಿದೆ. ಉಗುರು ಕಚ್ಚುವಿಕೆಯನ್ನು ಮನೋವಿಜ್ಞಾನದಲ್ಲಿ ‘ಒನಿಕೊಫೇಜಿಯಾ’ ಎನ್ನುತ್ತಾರೆ. ವೃತ್ತಿಪರ ಆರೋಗ್ಯ ಕಾರ್ಯಕರ್ತರ ಮಾರ್ಗಸೂಚಿಗಳ ಪ್ರಕಾರ ಇದೊಂದು ಮಾನಸಿಕ ಗೀಳು.
ಉಗುರು ಕಚ್ಚುವುದು ಗೀಳು-ಕಂಪಲ್ಸಿವ್ ಅಥವಾ ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್‌ಗೆ(ಒಸಿಡಿ) ಸಂಬಂಧಿಸಿರಬಹುದು ಎಂದು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ತಿಳಿಸಿದೆ. ಇರಾನಿನ ಜರ್ನಲ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಮಾನಸಿಕ ಅಸ್ವಸ್ಥತೆ ಹೊಂದಿರುವ 80% ಮಕ್ಕಳು ಉಗುರು ಕಚ್ಚುವ ಅಭ್ಯಾಸ ಹೊಂದಿದ್ದರು ಎಂದು ತಿಳಿಸಿದೆ.
ಜರ್ನಲ್ ಆಫ್ ಬಿಹೇವಿಯರಲ್ ಥೆರಪಿ ಮತ್ತು ಪ್ರಾಯೋಗಿಕ ಮನೋವೈದ್ಯಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಖಿನ್ನತೆ ಸೇರಿದಂತೆ ಇತರ ನಾಲ್ಕು ಭಾವನೆಗಳನ್ನು ಕುರಿತು ಅಧ್ಯಯನ ನಡೆಸಿದರು. ಆ ಅಧ್ಯಯನದಿಂದ ತಿಳಿದುಬಂದ ಸಂಗತಿಯೆಂದರೆ ಖಿನ್ನತೆಗೆ ಒಳಗಾದ ಜನರು ಉಗುರುಗಳನ್ನು ಕಚ್ಚುತ್ತಲೇ ಇರುತ್ತಾರೆ! ವಿಶೇಷವಾಗಿ ಒಬ್ಬ ವ್ಯಕ್ತಿ ಒತ್ತಡಕ್ಕೊಳಗಾದಾಗ ಅಥವಾ ಖಿನ್ನತೆಗೊಳಗಾದಾಗ ಆ ಸಮಯದಲ್ಲಿ ಏನನ್ನಾದರೂ ಮಾಡಬೇಕು ಎನಿಸುತ್ತದೆ, ಆಗ ಉಗುರುಗಳನ್ನು ಕಚ್ಚಲು ಆರಂಭಿಸುತ್ತಾರೆ ಎಂದು ಅಧ್ಯಯನವು ತಿಳಿಸಿದೆ.

ಆದರೆ ಕೆಲವು ವಿಜ್ಞಾನಿಗಳು ಕಂಪಲ್ಸಿವ್ ದಿಸಾರ್ಡರ್ ನಿಂದಾಗಿ ಉಗುರು ಕಚ್ಚುವಿಕೆಯ ಸಮಸ್ಯೆಯು ಉಂಟಾಗುತ್ತದೆ ಎಂದು ಒಪ್ಪುವುದಿಲ್ಲ, ಇದು ಪ್ರಚೋದನಾ ನಿಯಂತ್ರಣ ವೈಫಲ್ಯದಿಂದ ಉಂಟಾಗುತ್ತದೆ, ಉಗುರು ಕಚ್ಚುವಿಕೆಗೆ ಹಾಗೂ ಒಸಿಡಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಈ ಉಗುರು ಕಚ್ಚುವ ಸಮಸ್ಯೆಯ ನಿವಾರಣೆಗೆ ಕೆಲವು ಪರಿಹಾರಗಳಿವೆ. ನೀವು ಉಗುರನ್ನು ಆಗಾಗ ತೆಗೆಯುತ್ತಲಿದ್ದರೆ ಆಗ ಉಗುರು ಕಚ್ಚುವ ಬಯಕೆ ಬರುವುದಿಲ್ಲ. ನೈಲ್ ಪಾಲಿಷ್ ಹಾಕಿ! ನೈಲ್ ಪಾಲಿಷ್ ತುಂಬಾ ಕಹಿಯಾಗಿರುತ್ತದೆ. ನೈಲ್ ಪಾಲಿಷ್ ಹಾಕಿದ ಬೆರಳನ್ನು ನೀವು ಬಾಯಿಗೆ ಇಟ್ಟಾಗ ಕಹಿಯಾಗುವುದರಿಂದ ಬೆರಳನ್ನು ಹಿಂತೆಗೆಯುವಿರಿ.
ಗ್ಲೌಸ್ ಧರಿಸಿ, ಇದು ತಾತ್ಕಾಲಿಕ ಪರಿಹಾರ. ನೀವು ಬಟ್ಟೆಯ ಗ್ಲೌಸ್ ಧರಿಸಿದರೆ ಉಗುರು ಕಚ್ಚುವುದು ನಿಲ್ಲುವುದು.
ಉಗುರು ಕಚ್ಚುತ್ತಿರುವುದು ಏತಕ್ಕಾಗಿ ಎಂದು ವಿಶ್ಲೇಷಿಸಿ. ನೀವು ಯಾವ ಕಾರಣಕ್ಕಾಗಿ ಉಗುರು ಕಚ್ಚುತ್ತಲಿದ್ದೀರಿ ಎಂದು ತಿಳಿದರೆ ಆಗ ಆ ಅಭ್ಯಾಸವನ್ನು ನಿಲ್ಲಿಸಬಹುದು. ಬೇರೆ ಅಭ್ಯಾಸ ರೂಢಿಸಿಕೊಳ್ಳಿ, ಚೂಯಿಂಗ್ ಗಮ್ ಜಗಿಯುವ ಮೂಲಕ ನೀವು ಬೇರೆ ಅಭ್ಯಾಸ ರೂಢಿಸಿಕೊಳ್ಳಬಹುದು. ಕೈಯಲ್ಲಿ ಒತ್ತಡ ನಿವಾರಣೆಯ ಚೆಂಡನ್ನು ಹಿಡಿದುಕೊಳ್ಳುವಂತ ಅಭ್ಯಾಸವನ್ನು ರೂಡಿಸಿಕೊಳ್ಳಿ.