ನಾನು ಹಣ ಕೊಡಲಿ ಬಿಡಲಿ, ಲೆಕ್ಕ ಕೇಳೋ ಅಧಿಕಾರ ನನಗಿದೆ: ಸಿದ್ದರಾಮಯ್ಯ

ಮೈಸೂರು: ಜನಸಾಮಾನ್ಯರು ದೇಣಿಗೆ ನೀಡುತ್ತಿರುವುದು ರಾಮಮಂದಿರ ನಿರ್ಮಾಣಕ್ಕೆ ಹೊರತು ಬಿಜೆಪಿಗಾಗಿ ಅಲ್ಲ, ಹೀಗಾಗಿ ಲೆಕ್ಕ ಕೇಳುವ ಅಧಿಕಾರ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ದೇಶದ ಪ್ರಜೆ, ನಾನು ದುಡ್ಡು ಕೊಡಲಿ ಬಿಡಲಿ, ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ ಹಾಗೂ ಲೆಕ್ಕ ಕೇಳುವುದು ನಮ್ಮ ಹಕ್ಕು. ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ ಎಂದು. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದರು.

ಇದೇ ವೇಳೆ ತಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ರಾಮ ಜನರ ಧಾರ್ಮಿಕ ನಂಬಿಕೆ.ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ ಅದರಲ್ಲೇನಿದೆ.ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ.
ಇದನ್ನು ಬಿಜೆಪಿ ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ಟೀಕಿಸಿದರು.

ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಕೊರೊನಾ ವಿಷಯದಲ್ಲೂ ಭ್ರಷ್ಟಾಚಾರ ಮಾಡಲು ಕಾಯುತ್ತಿರುವಂತಿದೆ. ಭ್ರಷ್ಟಾಚಾರವೇ ಇವರ ಕೆಲಸ,ಎಲ್ಲಿ ಕೆಲಸ ಇದೆಯೋ ಅಲ್ಲಿ ದುಡ್ಡು ಹೊಡೆಯುತ್ತಾರೆ.

ಕೊರೊನಾ ಮೊದಲ ಅಲೆಯಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದನ್ನು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ.
ಈಗಲೂ ಅದೇ ನಡೆಯುತ್ತದೆ, ಈ ಸರ್ಕಾರ ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎರಡನೇ ಅಲೆ ಗಂಭೀರವಾಗಿ ಪರಿಗಣಿಸಬೇಕು ಕೇರಳ ಇರಲಿ ಆಫ್ರಿಕಾದಿಂದಲೇ ಬರಲಿ ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದರು.

ರಾಜ್ಯ ಬಜೆಟ್ ಕುರಿತು ಮಾತನಾಡಿದ ಅವರು, ಇವರ ಬಜೆಟ್ ಮೇಲೆ ಯಾವ ನಿರೀಕ್ಷೆಯೂ ಇಲ್ಲ. ಕಾರಣ ಇವರ ಬಳಿ ಹಣವೇ ಇಲ್ಲ.
ನಾನು ಕೇಳಿದ ಪ್ರಶ್ನೆಗಳಿಗೆ ಇನ್ನು ಉತ್ತರ ಕೊಟ್ಟಿಲ್ಲ. ಇನ್ನು ಬಜೆಟ್‌ನಲ್ಲಿ ಏನು ಉತ್ತರ ಕೊಡುತ್ತಾರೆ. ಪ್ರಶ್ನೆ ಕೇಳಿದೆ ಬರೆದುಕೊಂಡು ಬಂದು ಉತ್ತರ ಕೊಡುತ್ತಾರೆ. ಇವರಿಂದ ಯಾವುದೇ ನಿರೀಕ್ಷೆ ಇಲ್ಲ ಎಂದರು.

ಸಚಿವ ಉಮೇಶ್ ಕತ್ತಿ ವಿರುದ್ಧ ಕಿಡಿಕಾರಿದ ಅವರು, ಬಿಪಿಎಲ್ ಕಾರ್ಡ್ ನೀಡುವ ವಿಷಯದಲ್ಲಿ ಸಚಿವರು ಕೈಗೊಂಡ ನಿರ್ಧಾರ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

Exit mobile version