ನೂತನ ಶಿಕ್ಷಣ ನೀತಿ ವಿರೋಧಿಸಿ ಸಿಎಫ್‌ಐ ವತಿಯಿಂದ ಪ್ರತಿಭಟನೆ

ಬೆಂಗಳೂರು ಸೆ 14 : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಡೆದಿದೆ

ನಗರದಲ್ಲಿಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ವಿಧಾನಸೌಧ ಮುತ್ತಿಗೆ ಹಾಕಲು ಕೂಡ ಯತ್ನಿಸಿದರು .ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ತಡೆಯಲೆತ್ನಿಸಿದ್ದು ಅದು ಸಾಧ್ಯವಾಗದಿದ್ದಾಗ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಕ್ಷಣ:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣದಲ್ಲಿ 5ನೇ ತರಗತಿಯವರೆಗೆ ಮಕ್ಕಳ ಶಿಕ್ಷಣದ ಮಾಧ್ಯಮ ಇನ್ನೂ ಮುಂದುವರಿದು 8ನೇ ತರಗತಿಯವರೆಗೆ ಸ್ಥಳೀಯ ಭಾಷೆಯಲ್ಲಿದ್ದರೆ ಒಳ್ಳೆಯದು ಎಂದು ಹೇಳಿದೆ. ಆದರೆ ಇದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕೂಡ ಅನ್ವಯವಾಗುತ್ತದೆಯೇ ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಸ್ಪಷ್ಟವಾಗಿಲ್ಲ. 

ಈಗಿರುವ 10+2 ಶಿಕ್ಷಣ ವ್ಯವಸ್ಥೆಯನ್ನು 5+3+3+4 ಸೂತ್ರದಲ್ಲಿ ವಿಂಗಡಿಸಲಾಗುತ್ತದೆ. ಅದರರ್ಥ ಮೊದಲ 5 ವರ್ಷಗಳು ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕಿಕೊಡುವ ಹಂತವಾಗಿದ್ದು ಅದು 3 ವರ್ಷ ಪ್ರಾಥಮಿಕ ಪೂರ್ವ 1 ಮತ್ತು 2ನೇ ತರಗತಿಯಾಗಿರುತ್ತದೆ.

ಮುಂದಿನ ಮೂರು ವರ್ಷ ಅಂದರೆ 3ರಿಂದ 5ನೇ ತರಗತಿಯವರೆಗೆ ಪೂರ್ವ ಸಿದ್ದತಾ ಹಂತವೆಂದು ವಿಂಗಡಿಸಲಾಗಿದೆ. ನಂತರದ ಮೂರು ಮಾಧ್ಯಮಿಕ ಹಂತದ ವರ್ಷ 6ರಿಂದ 8ನೇ ತರಗತಿ ಮತ್ತು ಮತ್ತೆ ನಾಲ್ಕು ವರ್ಷ ದ್ವಿತೀಯ ಹಂತ ಅಂದರೆ 9ರಿಂದ 12ನೇ ತರಗತಿಯಾಗಿರುತ್ತದೆ. 

ಶಾಲೆಗಳಲ್ಲಿ ಕಲಾ,ವಾಣಿಜ್ಯ, ವಿಜ್ಞಾನ ಎಂಬ ಕಲಿಕೆಗೆ ಪ್ರತ್ಯೇಕ ಕಟ್ಟುನಿಟ್ಟಿನ ವಿಭಾಗವಿರುವುದಿಲ್ಲ. ವಿದ್ಯಾರ್ಥಿಗಳು ತಮ್ಮಿಚ್ಚೆಯ ವಿಭಾಗವನ್ನು ಆರಿಸಿಕೊಂಡು ಕಲಿಯಬಹುದು. ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಸವಿಸ್ತಾರ ವರದಿಯನ್ನು ವರ್ಷದ ಕೊನೆಗೆ ರಿಪೋರ್ಟ್ ಕಾರ್ಡ್ ನಲ್ಲಿ ನೀಡಲಾಗುತ್ತದೆ. 6ನೇ ತರಗತಿ ನಂತರ ವೃತ್ತಿಪರ ಶಿಕ್ಷಣ ನೀಡಲಾಗುತ್ತದೆ. ಎಂಬುವುದು ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ.

Exit mobile version