ನವಾಬ್‌ ಮಲಿಕ್‌ಗೆ ದಾವೂದ್‌ ನಂಟು – ದೇವೇಂದ್ರ ಫಡ್ನವೀಸ್‌

ಮುಂಬೈ ನ 10 : ನಟ ಶಾರುಖ್‌ ಪುತ್ರನನ್ನು ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಹಲವು ಆರೋಪ ಮಾಡಿದ್ದ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಹಾಗೂ ಅವರ ಕುಟುಂಬ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ನಂಟಿರುವ ವ್ಯಕ್ತಿಗಳಿಂದ ಭೂಮಿ ಖರೀದಿಸಿದೆ ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ‘ಬಾಂಬ್‌’ ಸಿಡಿಸಿದ್ದಾರೆ.

ಮಾದಕ ವಸ್ತು ಕಳ್ಳ ಜಾಗಣೆ ಸಾಲದ ವ್ಯಕ್ತಿಗಳ ಜತೆ ತಮಗೆ ಹಾಗೂ ತಮ್ಮ ಪತ್ನಿಗೆ ನಂಟು ಇದೆ ಎಂದು ಆರೋಪಿಸಿದ್ದ ಮಲಿಕ್‌ ಅವರಿಗೆ ಈ ಮೂಲಕ ಫಡ್ನವೀಸ್‌ ತಿರುಗೇಟು ನೀಡಿದ್ದಾರೆ.

‘1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸರ್ದಾರ್‌ ಖಾನ್‌ ಹಾಗೂ ಸಲೀಂ ಇಶಾಕ್‌ ಪಟೇಲ್‌ ಎಂಬುವರು ದೋಷಿಗಳಾಗಿದ್ದರು. ಕುರ್ಲಾದಂಥ ಪ್ರತಿಷ್ಠಿತ ಪ್ರದೇಶದಲ್ಲಿನ 2.8 ಎಕರೆ ಭೂಮಿಯನ್ನು ಮಲಿಕ್‌ ಅವರ ಸಾಲಿಡಸ್‌ ಇನ್ವೆಸ್ಟ್‌ಮೆಂಟ್‌ ಕಂಪನಿ ಕೇವಲ 30 ಲಕ್ಷ ರು.ಗೆ ಖರೀದಿಸಿತ್ತು. ದೋಷಿಗಳಿಂದ ಹೇಗೆ ಇಷ್ಟು ಜಮೀನು ಖರೀದಿಸಿದ್ದಿರಿ? ಅದೂ 30 ಲಕ್ಷ ರು. ಪುಡಿಗಾಸಿನಲ್ಲಿ’ ಎಂದು ಫಡ್ನವೀಸ್‌ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯ ತಮಗೆ ಗೊತ್ತಿರಲಿಲ್ಲ. ಒಂದು ವೇಳೆ ತಿಳಿದಿದ್ದರೆ ಆಗಲೇ ಮಲಿಕ್‌ ಅಕ್ರಮವನ್ನು ಅನಾವರಣಗೊಳಿಸುತ್ತಿದ್ದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಪ್ರಶ್ನೆ ಏನೆಂದರೆ, ನೀವು ಸಚಿವರಾಗಿದ್ದಾಗ ಈ ಡೀಲ್ ನಡೆದಿದೆ. ಸಲೀಂ ಪಟೇಲ್ ಯಾರೆಂದು ನಿಮಗೆ ತಿಳಿದಿದೆಯೇ? ಅಪರಾಧಿಗಳಿಂದ ಏಕೆ ನೀವು ಜಮೀನು ಖರೀದಿಸಿದ್ದೀರಿ? ಅವರು ಮೂರು ಎಕರೆ ಪ್ಲಾಟ್ ಅನ್ನು ಕೇವಲ 30 ಲಕ್ಷ ರೂಪಾಯಿಗೆ ಏಕೆ ಮಾರಾಟ ಮಾಡಿದರು?’ ಎಂದು ಕೇಳಿದ್ದಾರೆ.

Exit mobile version