ಮೌಲ್ಯ ಕಳೆದುಕೊಂಡ ರಾಜಕೀಯ ಚರ್ಚೆಗಳು!

BJP

ಇತ್ತೀಚಿನ ದಿನಗಳಲ್ಲಿ ರಾಜಕೀಯ ಚರ್ಚೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ ಕೇಂದ್ರೀತವಾಗಿರಬೇಕಿದ್ದ ಚರ್ಚೆಗಳು, ಓಲೈಕೆ ರಾಜಕಾರಣದ ಭಾಗವಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ.

ರಾಜ್ಯದಲ್ಲಿ ಬಿಜೆಪಿ(BJP), ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಮೂರು ಪಕ್ಷಗಳು ತಮ್ಮ ಮತಬ್ಯಾಂಕ್(VoteBank) ಉಳಿವಿಗಾಗಿ ಮತ್ತು ಮತಬ್ಯಾಂಕ್ ಪರವಾಗಿ ವಾಗ್ವಾದ ನಡೆಸುತ್ತಿವೆ. ಆದರೆ ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ ಕೇಂದ್ರೀತ ವಿಷಯಗಳಲ್ಲಿ ಮೂರು ಪಕ್ಷಗಳು ದಿವ್ಯ ಮೌನವಹಿಸುತ್ತಿವೆ. ಇದು ರಾಜಕೀಯ ಅಂಧಃಪತನದ ಸಂಕೇತದಂತೆ ಗೋಚರವಾಗುತ್ತಿದೆ. ಆರ್‍ಎಸ್‍ಎಸ್ ಮೂಲ ಕೆದಕುವ ಚರ್ಚೆ ಕಾಂಗ್ರೆಸ್‍ನದ್ದಾಗಿದ್ದರೆ, ಗಾಂಧಿ ಕುಟುಂಬದ ಮೂಲ ಹುಡುಕುವ ಚರ್ಚೆ ಬಿಜೆಪಿಯದ್ದು, ಇವೆರಡರ ಮಧ್ಯೆ ಕುಟುಂಬ ರಾಜಕೀಯದ ಚರ್ಚೆ ಜೆಡಿಎಸ್‍ನದ್ದು.

ಹೀಗೆ ಮೂರು ಪಕ್ಷಗಳು ಅರ್ಥಹೀನ ವಿಷಯಗಳ ಚರ್ಚೆಗಳಲ್ಲೇ ಸಮಯ ವ್ಯರ್ಥ ಮಾಡುತ್ತಿವೆ. ಆಡಳಿತ ಪಕ್ಷವಾಗಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದ್ದರೆ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಜನರನ್ನು ಮತ್ತಷ್ಟು ಪ್ರಚೋದಿಸಿ ದಾರಿ ತಪ್ಪುವಂತೆ ಮಾಡುತ್ತಿವೆ. ಕಳೆದ ಕೆಲ ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ರಾಜಕೀಯ ಚರ್ಚೆಗಳ ಮೌಲ್ಯ ಅರ್ಥವಾಗುತ್ತದೆ. ಸರ್ಕಾರವನ್ನು ಎಚ್ಚರಿಸುತ್ತಾ, ಜನರಿಗೆ ಮಾರ್ಗದರ್ಶನ ನೀಡಬೇಕಾದ ವಿಪಕ್ಷಗಳು ಮತಬ್ಯಾಂಕ್ ಕೇಂದ್ರೀತ ಚರ್ಚೆಗೆ ಮುಂದಾಗಿದ್ದಾರೆ. ಆಡಳಿತ ಪಕ್ಷವೂ ತಮ್ಮ ಮತಬ್ಯಾಂಕ್ ಕೇಂದ್ರೀತ ಚರ್ಚೆಗೆ ಮುಂದಾಗಿದೆ.

ಮೂರು ಪಕ್ಷಗಳ ಅರ್ಥಹೀನ ರಾಜಕೀಯದಿಂದ ರಾಜ್ಯದ ಸಾಮಾನ್ಯ ಜನರು ಅಭಿವೃದ್ದಿಯಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಕೇಳಿಬಂದ ನೇಮಕಾತಿ ಹಗರಣಗಳ ಕುರಿತು ಗಂಭೀರ ಚರ್ಚೆ ನಡೆಸಬೇಕಾದ ವಿಪಕ್ಷಗಳು ಧರ್ಮ ಕೇಂದ್ರೀತ ಚರ್ಚೆಗೆ ಮುಂದಾಗಿವೆ. ಅಕ್ರಮಗಳ ಕುರಿತು ಗಟ್ಟಿ ನಿಲುವು ತಳೆಯಬೇಕಿದ್ದ ಆಡಳಿತ ಪಕ್ಷ ಮೌನಕ್ಕೆ ಜಾರಿದೆ.

ಒಟ್ಟಾರೆಯಾಗಿ ರಾಜ್ಯ ರಾಜಕೀಯ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ವಿವಾದ ಹುಟ್ಟು ಹಾಕುವ ಕೇಂದ್ರಗಳಾಗುತ್ತಿವೆ.

Exit mobile version