ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಾಲ

ಬರ್ಮಿಂಗ್‌ಹ್ಯಾಂ, ನ 10 : ನೊಬೆಲ್ ಪುರಸ್ಕೃತ ಮಲಾಲಾ ಯೂಸುಫ್‌ಜಾಯ್‌ ಅವರು ಅಸರ್ ಎಂಬುವವರನ್ನು ಮದುವೆಯಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಬರ್ಮಿಂಗ್‌ಹ್ಯಾಂ ನಗರದ ನಿವಾಸದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ.

“ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟೆದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ” ಎಂದು ಮಲಾಲ ಬರೆದಿದ್ದಾರೆ.

ನೊಬೆಲ್ ಶಾಂತಿ ಪುರಸ್ಕೃತೆ ಮಲಾಲ ಯೂಸಫ್ ಅವರು ಕೇಂದ್ರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಉನ್ನತ ಪ್ರದರ್ಶನ ಕೇಂದ್ರ ವಿಭಾಗದ ಜನರಲ್ ಮ್ಯಾನೇಜರ್ ಆಗಿರುವ ಅಸ್ಸರ್ ಮಲಿಕ್ ಅವರನ್ನು ಮಲಾಲ ವರಿಸಿದ್ದಾರೆ.

ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಆಂದೋಲನ ನಡೆಸುತ್ತಿದ್ದ ಮಲಾಲ ಮೇಲೆ 2012ರಲ್ಲಿ ತಾಲಿಬಾನ್ ಉಗ್ರರಿಂದ ದಾಳಿ ನಡೆದಿತ್ತು. ಆಗ 15 ವರ್ಷದವರಾಗಿದ್ದ ಮಲಾಲ, ಸ್ವಾಟ್ ವ್ಯಾಲಿಯಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಮಲಾಲ ಅವರಿಗೆ ಚಿಕಿತ್ಸೆ ನೀಡಿ ರಕ್ಷಿಸಲಾಗಿತ್ತು.

ವೈದ್ಯಕೀಯ ಚಿಕಿತ್ಸೆಗಾಗಿ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಮಲಾಲ, ಬಳಿಕ ಅಲ್ಲಿಯೇ ನೆಲೆಸಿದ್ದಾರೆ. ಅವರ ಕುಟುಂಬ ಕೂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ನೆಲೆಸಿದೆ. ಅಲ್ಲಿಯೂ ಅವರು ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಆಂದೋಲನ ಮುಂದುವರಿಸಿದ್ದರು. 2014ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿತ್ತು. 17ನೇ ವಯಸ್ಸಿನಲ್ಲಿಯೇ ಈ ಪುರಸ್ಕಾರಕ್ಕೆ ಪಾತ್ರರಾದ ಅವರು, ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಕಳೆದ ವರ್ಷ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದರು.

Exit mobile version