ದಂಡಿಯಾತ್ರೆ ಆರಂಭವಾದ ದಿನವಿಂದು: ಪ್ರಧಾನಿ ಮೋದಿಯಿಂದ ೨೪೧ ಮೈಲಿಗಳ ಸುದೀರ್ಘ ಪಾದಯಾತ್ರೆಗೆ ಚಾಲನೆ

ಅಹಮದಾಬಾದ್, ಮಾ. 12: ಇಂದು ಐತಿಹಾಸಿಕ ದಂಡಿ ಪಾದಯಾತ್ರೆಯನ್ನು ಮಹಾತ್ಮ ಗಾಂಧೀಜಿಯವರು ಆರಂಭಿಸಿದ ದಿನ. ಅಲ್ಲದೇ, ಭಾರತ ಸ್ವಾತಂತ್ರ್ಯ ಪಡೆದು 2022 ಕ್ಕೆ 75 ವರ್ಷ ತುಂಬುವ ಕಾರಣ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸ್ಮಾರಕವಾಗಿ `ದಂಡಿ ಮಾರ್ಚ್’ ಅ​ನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ದೇಶದ ವಿವಿಧ ಭಾಗದ 81 ಸ್ವಯಂ ಸೇವಕರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ಅಭಯ್ ಘಾಟ್ ತಲುಪಿದ್ದಾರೆ. ಅಭಯ್ ಘಾಟ್ ಪಕ್ಕದ ಮೈದಾನದಿಂದ ಆರಂಭವಾಗುವ 21 ದಿನಗಳ 241 ಮೈಲುಗಳ ದಂಡಿ ಮಾರ್ಚ್​ ಪಾದಯಾತ್ರೆ ದೇಶದ ಭವ್ಯ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸಬರಮತಿ ಆಶ್ರಮ ತಲುಪಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಗೌರವ ಅರ್ಪಿಸಿದ್ದಾರೆ.

2021 ದಂಡಿ ಪಾದಯಾತ್ರೆಯಲ್ಲಿ ಯಾರೆಲ್ಲ ಇರಲಿದ್ದಾರೆ?
ಗುಜರಾತ್​ನ ರಾಜ್ಯ ಕ್ರೀಡಾ ಸಚಿವ ಈಶ್ವರ್​ ಸಿನ್ಹ ಅವರು ತಿಳಿಸಿದಂತೆ, 1930 ರಲ್ಲಿ ಗಾಂಧಿಯವರೊಂದಿಗೆ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಆದರೆ ಅವರಿಗೆ ವಯಸ್ಸಾಗಿರುವ ಕಾರಣ ಅವರು ಈ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇನ್ನುಳಿದಂತೆ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದ್ದ 78 ಜನರ ಸವಿನೆನಪಿಗಾಗಿ ಅಹಮದಾಬಾದ್​ನಿಂದ ದಂಡಿವರೆಗಿನ ಸುಮಾರು 386 ಕಿ. ಮೀ ಪಾದಯಾತ್ರೆಯಲ್ಲಿ 81 ಜನರು ಭಾಗಿಯಾಗಲಿದ್ದಾರೆ. ಅಲ್ಲದೆ ಇನ್ನೂ ಇಬ್ಬರು ಮಾರ್ಗ ಮಧ್ಯದಲ್ಲಿ ಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ.

ಗಾಂಧಿ ದಂಡಿಯಾತ್ರೆ ನಡೆಸಿದ ಸಲುವಾಗಿ ದೇಶದ ಇತರ ಭಾಗಗಳಿಂದ ಗಾಂಧಿಯವರ ಯಾತ್ರೆಗೆ ಬೆಂಬಲವಾಗಿ ಯಾತ್ರೆ ನಡೆಸಿದ ಪ್ರಮುಖ 75 ಸ್ಥಳಗಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಕಾರ್ಯಕ್ರಮಗಳು ಏಕಕಾಲದಲ್ಲಿ ಮಾರ್ಚ್ 12 ರಂದು ನಡೆಯಲಿವೆ. ಅಲ್ಲದೆ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ರಾತ್ರಿ ವೇಳೆ ತಂಗುವ 21 ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ. ಹಾಗೆಯೇ ಈ 21 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿ ದಿನ ರಾಜಕೀಯ ನಾಯಕರು ಹಾಜರಾಗಲಿದ್ದಾರೆ.

ಮೆರವಣಿಗೆಯನ್ನು ಕಾಂಗ್ರೆಸ್ ಈ ಹಿಂದೆ ಸ್ಮರಿಸಿತ್ತು..
2005 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ದಂಡಿ ಮಾರ್ಚ್‌ನ 75 ವರ್ಷಗಳ ನೆನಪಿಗಾಗಿ ಇದೇ ರೀತಿಯ ಪಾದಯಾತ್ರೆಯನ್ನು ಪ್ರಾರಂಭಿಸಿತ್ತು. ಆಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ಮೆರವಣಿಗೆಗೆ ಚಾಲನೆ ನೀಡಿದ್ದರು. ಅಲ್ಲದೆ ಕೊನೆಯ ಹಂತದ ಮೆರವಣಿಗೆಯಲ್ಲಿ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ದಂಡಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Exit mobile version