ಚಹಾ ಸೇವನೆಯನ್ನು ಕಡಿಮೆ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ ಪಾಕ್ ಸರ್ಕಾರ!

Pakistan

ನಮ್ಮ ದೇಶದಲ್ಲಿ ಚಹಾ(Tea) ಎನ್ನುವುದು ಸಾಕಷ್ಟು ಜನರಿಗೆ ಎನರ್ಜಿ ಡ್ರಿಂಕ್ ಆಗಿದೆ, ಚಹಾವಿಲ್ಲದೆ ದಿನ ಆರಂಭ ಅಪೂರ್ಣವಾದಂತೆ. ಆದರೆ ಚಹಾ ಆಮದಿನಲ್ಲಿ ಮೊದಲನೇ ಸ್ಥಾನದಲ್ಲಿರುವುದು ಪಾಕಿಸ್ತಾನ(Pakistan). ಹೌದು, ಪಾಕಿಸ್ತಾನ ವಿಶ್ವದಲ್ಲೇ ಅತಿ ಹೆಚ್ಚು ಚಹಾ ಆಮದು(Import) ಮಾಡಿಕೊಳ್ಳುವ ದೇಶವಾಗಿದೆ. ಕಳೆದ ವರ್ಷ ಪಾಕಿಸ್ತಾನವು 600 ಮಿಲಿಯನ್ ಡಾಲರ್ ಎಂದರೆ ಸುಮಾರು 5,000 ಕೋಟಿ ರೂ. ಮೌಲ್ಯದ ಚಹಾವನ್ನು ಆಮದು ಮಾಡಿಕೊಂಡಿತ್ತು.

ಹೀಗಾಗಿ, ಆಮದಿನ ವೆಚ್ಚ ಜಾಸ್ತಿಯಾಗಿದ್ದು, ಪಾಕಿಸ್ತಾನದ ಆರ್ಥಿಕತೆ ಕುಸಿಯಲು ಭಾರಿ ಪ್ರಮಾಣದ ಟೀ ಆಮದು ಕೂಡಾ ಕಾರಣವಾಗಿದೆ ಎಂದು ಪಾಕ್‌ ಸರ್ಕಾರ ಅಳಲು ತೋಡಿಕೊಂಡಿದೆ. ಇತ್ತೀಚಿಗೆ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆ ಪಾಕ್ ಸರ್ಕಾರ “ಚಹಾ ಆಮದಿಗೆ ನಮ್ಮ ಬಳಿ ಹಣವಿಲ್ಲ, ಚಹಾ ಬಳಕೆಗೆ ಕಡಿವಾಣ ಹಾಕಿ” ಎಂದು ಜನರಲ್ಲಿ ಮನವಿ ಮಾಡಿಕೊಂಡಿದೆ.

ಪಾಕಿಸ್ತಾನವು ಸಾಲ ಪಡೆದು ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ವೆಚ್ಚವನ್ನು ಕಡಿಮೆ ಮಾಡಲು ಪ್ರತಿದಿನ ಒಂದು ಅಥವಾ ಎರಡು ಕಪ್ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿದೇಶಿ ವಿನಿಮಯವನ್ನು ಉಳಿಸುವ ಪ್ರಯತ್ನದ ಭಾಗವಾಗಿ ಕಳೆದ ತಿಂಗಳು ಪಾಕ್‌ ಸರ್ಕಾರವು ಐಷಾರಾಮಿ ವಸ್ತುಗಳ ಆಮದನ್ನು ನಿರ್ಬಂಧಿಸಿತ್ತು.

ಆದರೆ ಟೀ ಸೇವನೆಯನ್ನು ಕೂಡ ಒಂದರಿಂದ ಎರಡು ಕಪ್‌ಗಳಷ್ಟು ಕಡಿಮೆ ಮಾಡುವಂತೆ ಹೇಳಿರುವುದು ಪಾಕ್ ಜನರಿಗೆ ಇರಿಸು-ಮುರಿಸು ತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ನಾವು ಚಹಾ ಸೇವನೆಯನ್ನು ತ್ಯಜಿಸಲ್ಲ ಎಂದು ಬಹುತೇಕ ಬಳಕೆದಾರರು ಹೇಳಿದ್ದಾರೆ.
ಆದರೆ, ಇತ್ತೀಚಿಗೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವರಾದ ಮಿಫ್ತಾ ಇಸ್ಮಾಯಿಲ್, ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಪಾಕಿಸ್ತಾನದ ಆರ್ಥಿಕತೆಯು ಶ್ರೀಲಂಕಾದಂತೆಯೇ ಆಗುತ್ತದೆ ಎಂದು ಎಚ್ಚರಿಸಿದ್ದರು.

Exit mobile version