ಪಂಚಮಸಾಲಿ ಮೀಸಲಾತಿ: ನನ್ನ ಬೆಂಬಲವಿದ್ದರೂ, ಅಪಪ್ರಚಾರ ಮಾಡಲಾಗುತ್ತಿದೆ: ಲಕ್ಷ್ಮಣ ಸವದಿ

ಬೆಂಗಳೂರು: ಪಂಚಮಸಾಲಿ ಮೀಸಲಾತಿಗೆ ಬೆಂಬಲವಿದ್ದರೂ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ಪಂಚಮಸಾಲಿ ಮೀಸಲಿಗೆ ನನ್ನ ಬೆಂಬಲವಿದೆ. ಸಚಿವ ಸಂಪುಟದ ನಿನ್ನೆಯ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದಾಗಿ ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಆದ್ದರಿಂದ ಈ ಸ್ಪಷ್ಟೀಕರಣವನ್ನು ನೀಡಬಯಸುತ್ತೇನೆ.

ನನ್ನ ವಿರುದ್ಧ ಸಮಾಜದಲ್ಲಿ ತಪ್ಪು ಭಾವನೆ ಸೃಷ್ಟಿಸಬೇಕೆಂಬ ದುರುದ್ದೇಶದಿಂದ ಸತ್ಯಕ್ಕೆ ದೂರವಾದ ಈ ಸಂಗತಿಯನ್ನು ಮಾಧ್ಯಮಗಳಿಗೆ ನೀಡಿ ಅಪಪ್ರಚಾರ ಕೈಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ನಾನು ಮೊದಲಿನಿಂದಲೂ ಪಂಚಮಸಾಲಿಗೆ ಮೀಸಲು ನೀಡಬೇಕೆಂಬ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ.

ಹಿಂದೆ ಬೆಳಗಾವಿಯ ಸುವರ್ಣಸೌಧದ ಎದುರು ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪರಮಪೂಜ್ಯ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ನಡೆಸಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ (ಕಳೆದ ಅಕ್ಟೋಬರ್‍ನಲ್ಲಿ) ನಾನೂ ಕೂಡ ಭೇಟಿಕೊಟ್ಟು ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅವರಿಗೆ ಬೆಂಬಲ ಸೂಚಿಸಿ ಆ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಮನವಿ ಮಾಡಿಕೊಂಡು ಶ್ರೀಗಳಿಗೆ ಎಳೆನೀರನ್ನು ಸೇವಿಸಲು ವಿನಂತಿಸಿಕೊಂಡಿದ್ದೆ. ಅದರಂತೆ ಶ್ರೀಗಳು ಅಂದು ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು ಎಂಬುದು ಎಲ್ಲಾ ಮಾಧ್ಯಮಗಳಲ್ಲೂ ವರದಿಯಾಗಿತ್ತು.

ವಾಸ್ತವ ಸ್ಥಿತಿ ಹೀಗಿರುವಾಗ ನಾನು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಮೊದಲಿನಿಂದಲೂ ನಾನು ಅನೇಕ ಸಂದರ್ಭಗಳಲ್ಲಿ ಪಂಚಮಸಾಲಿ ಸಮುದಾಯವು 2ಎ ಗೆ ಸೇರಬೇಕು ಎಂದು ಪ್ರತಿಪಾದಿಸುತ್ತಿದ್ದೇನೆ. ಅಷ್ಟೇಅಲ್ಲ, ನಮ್ಮ ಸರ್ಕಾರವೂ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ದಿಶೆಯಲ್ಲಿ ಗಂಭೀರ ಪರಾಮರ್ಶೆ ನಡೆಸುತ್ತಿದೆ. ಆದಾಗ್ಯೂ ನನ್ನ ವಿರುದ್ಧ ಅನವಶ್ಯಕವಾಗಿ ಇಲ್ಲಸಲ್ಲದ ಅಭಿಪ್ರಾಯಗಳನ್ನು ಸೃಷ್ಟಿಸಿ ಅಪಪ್ರಚಾರಕ್ಕೆ ಪ್ರಯತ್ನಿಸುತ್ತಿರುವ ಕಾಣದ ಕೈಗಳ ಕುತಂತ್ರವನ್ನು ನಂಬಬಾರದು ಎಂದು ನಾನು ಮತ್ತೊಮ್ಮೆ ಸಾರ್ವಜನಿಕರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

Exit mobile version