ಸಂಸತ್ತಿನಲ್ಲಿ ಕಲಾಪ 12 ಸದಸ್ಯರ ಅಮಾನತು

ಹೊಸದಿಲ್ಲಿ ನ 30 :ಕಳೆದ ಮುಂಗಾರು ಅಧಿವೇಶನದ ವೇಲೆ ಸಂಸತ್ತಿನ ಘನತೆಗೆ ಚ್ಯುತಿ ತಂದ ಆರೋಪದಡಿ, ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನ ಪ್ರತಿಭಟನೆ ನೆಪದಲ್ಲಿ ದುಂಡಾವರ್ತನೆ ಪ್ರದರ್ಶಿಸಿ ಸಂಸತ್‌ ಕಲಾಪದ ಘನತೆಗೆ ಧಕ್ಕೆ ತಂದ ಆಪಾದನೆಯಡಿ ಪ್ರತಿಪಕ್ಷಗಳ 12 ಸಂಸದರನ್ನು ಚಳಿಗಾಲ ಅಧಿವೇಶನದ ಮೊದಲ ದಿನವೇ ಅಮಾನತುಗೊಳಿಸಲಾಗಿದೆ.

ಈ ಅಧಿವೇಶನ ಪೂರ್ತಿ ಸದನಕ್ಕೆ ಅವರ ಪ್ರವೇಶ ನಿಷೇಧಿಸಲಾಗಿದೆ. ಕರ್ನಾಟಕದ ನಾಸಿರ್‌ ಹುಸೇನ್‌ ಸೇರಿದಂತೆ ಹನ್ನೆರಡು ಸಂಸದರನ್ನು ಅಮಾನತುಗೊಳಿಸುವ ನಿಲುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮಂಡಿಸಿದರು. ‘ಮುಂಗಾರು ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನೆಪದಲ್ಲಿ ಕೆಲವು ಸಂಸದರು, ಪೀಠದ ಗೌರವ ಧಿಕ್ಕರಿಸಿ ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದರು. ಉದ್ದೇಶಪೂರ್ವಕವಾಗಿಯೇ ಸದನದ ನಿಯಮಗಳನ್ನು ಗಾಳಿಗೆ ತೂರಿದ್ದರು. ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಹಿಂಸಾತ್ಮಕವಾಗಿಯೂ ವರ್ತಿಸಿದ್ದರು. ಹಿಂದೆಂದೂ ಕಾಣದ ದುರ್ವರ್ತನೆ ಪ್ರದರ್ಶಿಸಿದ ಹನ್ನೆರಡು ಸಂಸದರು ಕ್ಷಮೆಗೆ ಅರ್ಹರಲ್ಲ. ಅವರೆಲ್ಲರನ್ನೂ ಈ ಅಧಿವೇಶನದಿಂದ ಅಮಾನತುಗೊಳಿಸುವುದೇ ಸೂಕ್ತ’ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಅಧಿವೇಶನದ ವೇಳೆ ದಾಂಧಲೆ ಎಬ್ಬಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಕೇಂದ್ರ ಸರಕಾರ, ಸಭಾಪತಿಗೆ ಈ ಮೊದಲು ಮನವರಿಕೆ ಮಾಡಿಕೊಟ್ಟಿತ್ತು. ನಂತರ ಜೋಶಿ ಅವರು ಮಂಡಿಸಿದ ನಿಲುವಳಿಗೆ ರಾಜ್ಯಸಭೆ ಉಪ ಸಭಾಪತಿ ಹರಿವಂಶ್‌ ನಾರಾಯಣ್‌ ಸಿಂಗ್‌ ಸಮ್ಮತಿಯ ಮುದ್ರೆ ಒತ್ತಿದರು

ಅಮಾನತುಗೊಂಡ ಸದಸ್ಯರು: ಇಳಮರಮ್‌ ಕರೀಮ್‌(ಸಿಪಿಎಂ), ಫುಲೊ ದೇವಿ ನೇತಮ್‌ (ಕಾಂಗ್ರೆಸ್‌), ಛಾಯಾ ವರ್ಮಾ (ಕಾಂಗ್ರೆಸ್‌), ರಿಪುನ್‌ ಬೋರಾ (ಕಾಂಗ್ರೆಸ್‌), ಬಿನೋಯ್‌ ವಿಶ್ವಂ (ಸಿಪಿಐ), ರಾಜಮಣಿ ಪಟೇಲ್‌ (ಕಾಂಗ್ರೆಸ್‌), ಡೋಲಾ ಸೇನ್‌ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಸೈಯದ್‌ ನಾಸಿರ್‌ ಹುಸೇನ್‌ (ಕಾಂಗ್ರೆಸ್‌), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), ಅನಿಲ್‌ ದೇಸಾಯಿ (ಶಿವಸೇನೆ) ಮತ್ತು ಅಖಿಲೇಶ್‌ ಪ್ರಸಾದ್‌ ಸಿಂಗ್‌ (ಕಾಂಗ್ರೆಸ್‌).

Exit mobile version