ಮೇ 31 ರಂದು ಬರುತ್ತೇನೆ: ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ!

Bengaluru: ಪೆನ್ಡ್ರೈವ್ ಪ್ರಕರಣದ (Pendrive Case) ಮೂಲಕ ಇಡೀ ದೇಶಾದ್ಯಂತ ವಿವಾದ ಸೃಷ್ಟಿಸಿ ವಿದೇಶಕ್ಕೆ ಪರಾರಿಯಾಗಿದ್ದ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಲೈವ್ ಮೂಲಕ ಪ್ರತ್ಯಕ್ಷವಾಗಿ, ನಾನು ಮೇ 31ರಂದು ರಾಜ್ಯಕ್ಕೆ ಬರುತ್ತೇನೆ. ಎಸ್ಐಟಿ (SIT) ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ವಿದೇಶದಿಂದಲೇ ಲೈವ್ ಮೂಲಕ ಹಾಜರಾಗಿ, ಬೆಂಗಳೂರಿಗೆ (Bengaluru) ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್ಐಟಿ ಹಾಜರಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ, ಕಾನೂನಿನ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಕುಟುಂಬಸ್ಥರು, ಜೆಡಿಎಸ್ (JDS) ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನತೆಯ ಕ್ಷಮೆಯನ್ನೂ ಪ್ರಜ್ವಲ್ ರೇವಣ್ಣ (Prajwal Revanna) ಕೇಳಿದ್ದಾರೆ.

ಲೈವ್ನಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು?
ಲೋಕಸಭಾ ಚುನಾವಣೆಯ (Loksabha Election) ಮತದಾನದ ನಂತರ ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧಾರವಾಗಿತ್ತು. ನಾನು ವಿದೇಶಕ್ಕೆ ಹೋಗುವಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ಎಸ್ಐಟಿ ಕೂಡಾ ರಚನೆಯಾಗಿರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್ (Youtube) ಮೂಲಕ ನನ್ನ ಮೇಲೆ ಗಂಭೀರ ಆರೋಪ ಬಂದಿರುವ ವಿಚಾರ ತಿಳಿದು ಬಂದಿತು.

SIT ನನಗೆ ನೋಟಿಸ್ ನೀಡಿದ ವಿಚಾರವೂ ತಿಳಿಯಿತು. ಈ ಆರೋಪದ ಹಿಂದೆ ನನ್ನನ್ನು ರಾಜಕೀಯವಾಗಿ ತುಳಿಯುವ ಷಡ್ಯಂತ್ರ ಅಡಗಿದೆ. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ಈ ರೀತಿಯ ಪಿತೂರಿ ಮಾಡಿದ್ದಾರೆ. ಇದೆಲ್ಲವನ್ನೂ ನಾನು ಸಮರ್ಥವಾಗಿ ಎದುರಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದ್ದು, ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಆದರೆ ನನ್ನ ಮೇಲೆ ಈ ರೀತಿಯ ಆರೋಪ ಕೇಳಿ ಬಂದಾಗ ನಾನು ಖಿನ್ನತೆಗೆ ಒಳಗಾಗಿದ್ದೆ.

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಆರೋಪದಿಂದ ನಾನು ಮಾನಸಿಕ ಖಿನ್ನತೆಗೆ ಜಾರಿದ್ದೆ. ಈ ಖಿನ್ನತೆಯಿಂದ ಹೊರ ಬರಲು ನನಗೆ ಸಮಯ ಹಿಡಿಯಿತು. ಮೇ 31ರಂದು ರಾಜ್ಯಕ್ಕೆ ಬಂದು, ಎಲ್ಲಕ್ಕೂ ಉತ್ತರ ನೀಡುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

Exit mobile version