ರಾಷ್ಟ್ರೀಯ ವಾಹನ ಗುಜರಿ ನೀತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ನವದೆಹಲಿ, ಆ. 13: ಪ್ರಧಾನಿ ನರೇಂದ್ರ ಮೋದಿ ಬಹು ನಿರೀಕ್ಷಿತ ರಾಷ್ಟ್ರೀಯ ವಾಹನ ಗುಜರಿ ನೀತಿಗೆ ಚಾಲನೆ ನೀಡಿದ್ದು, ಇದು ಆತ್ಮನಿರ್ಭರ ಭಾರತ ಯೋಜನೆಯ ನಿಟ್ಟಿನಲ್ಲಿ ದೊಡ್ಡ ಮೈಲುಗಲ್ಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದ ಬಜೆಟ್ ಭಾಷಣದ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ವಾಹನಗಳ ಗುಜರಿ ನೀತಿಯನ್ನು ಪ್ರಸ್ತಾಪಡಿಸಿದ್ದರು. ಈ ವರ್ಷ ಈ ಪಾಲಿಸಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದರು.

ವಾಹನಗಳ ಗುಜರಿ ನೀತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ವಾಹನಗಳ ಮರುಬಳಕೆ ಈ ನೀತಿಯ ಪ್ರಮುಖ ಉದ್ದೇಶ. ಈ ನೀತಿಯು ದೇಶದಲ್ಲಿ 10,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನವನ್ನು ಬಳಸುತ್ತಿದೆ. ಈ ವಾಹನ ಗುಜರಿ ನೀತಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ದೊಡ್ಡ ಮೈಲುಗಲ್ಲಾಗಿದೆ ಎಂದು ಮೋದಿ ಹೇಳಿದ್ದಾರೆ.

ವಾಹನ ಗುಜರಿ ನೀತಿಯ ಬಗ್ಗೆ ಟ್ವಿಟ್ಟರ್​ನಲ್ಲೂ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪರಿಸರ ಸ್ನೇಹಿ ಯೋಜನೆಯ ಭಾಗವಾಗಿ ವಾಹನಗಳ ಗುಜರಿ ನೀತಿ ಜಾರಿಗೊಳಿಸಲಾಗಿದೆ. ಸ್ಟಾರ್ಟ್​ಅಪ್ ಸಂಸ್ಥೆಗಳು ಹಾಗೂ ಯುವಕರು ಈ ಯೋಜನೆಯಲ್ಲಿ ಭಾಗಿಯಾಗಬೇಕು ಎಂದಿದ್ದಾರೆ.

Exit mobile version