ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಇಂದು ಸಂಜೆ ನಡೆಯೋ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಸಿಎಂ ಹೆಸರು ಫೈನಲ್

ಬೆಂಗಳೂರು ಜು 27: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಹೊಸ ಸಿಎಂ ಆಯ್ಕೆಗೆ ಕಸರತ್ತು ಶುರುವಾಗಿದ್ದು, ಇದಕ್ಕಾಗಿ ನಗರದ ಕ್ಯಾಪಿಟಲ್‌ ಹೊಟೇಲ್‌ನಲ್ಲಿ ಇಂದು (ಜು.27) ರಾತ್ರಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಮುಖ್ಯಮಂತ್ರಿ ಸುಸೂತ್ರ ಆಯ್ಕೆ ಪ್ರಕ್ರಿಯೆಗಾಗಿ ದೆಹಲಿಯಿಂದ ವೀಕ್ಷಕರಾಗಿ ಬರುವ ಕೇಂದ್ರ ಸಚಿವರಾದ ಕಿಶನ್‌ ರೆಡ್ಡಿ ಮತ್ತು ಧರ್ಮೇಂದ್ರ ಪ್ರಧಾನ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲಿಗೆ ಹೊಸ ಮುಖ್ಯಮಂತ್ರಿ ಆಯ್ಕೆಗೆ ಬಗ್ಗೆ ಮಾಹಿತಿ ಸಂಗ್ರಹಿಸಿ ಬಳಿಕ ಹೆಸರು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

ರಾತ್ರಿ 7.30ಕ್ಕೆ ಈ ಸಭೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಬೇಗನೆ ಮುಗಿಸಿ ಗುರುವಾರದ ವೇಳೆಗೆ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಸಕಾಂಗ ಸಭೆ ಹಿನ್ನೆಲೆ ಬಿಜೆಪಿ ಶಾಸಕರಿಗೆ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ. ಸಂಭಾವ್ಯರ ಪಟ್ಟಿಯಲ್ಲಿ ಮುರುಗೇಶ್ ಆರ್. ನಿರಾಣಿ, ಸಿ.ಟಿ. ರವಿ, ಬಿ.ಎಲ್​. ಸಂತೋಷ್, ಪ್ರಹ್ಲಾದ್​ ಜೋಶಿ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಅರವಿಂದ್ ಬೆಲ್ಲದ್ ಹೆಸರು ಕೇಳಿ ಬರುತ್ತಿದೆ.

Exit mobile version