ಬೆಂಗಳೂರು ಸೆ 16 : ಪಾದಚಾರಿಗಳಿಗೆ ಓಡಾಡಲು ಅನಾನುಕೂಲ ವಾಗುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಬೇಕೆಂದು ಬೆಸ್ಕಾಂಗೆ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ.
ಪಾದಚಾರಿಗಳಿಗೆ ಓಡಾಡಲು ಅನಾನುಕೂಲ ವಾಗುತ್ತಿದ್ದ ಹಿನ್ನಲೆಯಲ್ಲಿ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್ ಫಾರ್ಮರ್‌ಗಳ ತೆರವುಗೊಳಿಸಬೇಕೆಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ವಿ.ಜಿ.ಅತ್ರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಜೊತೆಗೆ ಬೆಸ್ಕಾಂ ಸಲ್ಲಿಸಿದ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಟ್ರಾನ್ಸ್ ಫಾರ್ಮರ್‌ಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.
ಬೆಸ್ಕಾಂ ಪರ ವಾದಿಸಿದ ವಕೀಲ ಎಸ್.ಶ್ರೀರಂಗ, ನಗರದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್ ಫಾರ್ಮರ್‌ಗಳ ತೆರವು ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ಪ್ರಮಾಣಪತ್ರ ಸಲ್ಲಿಸಿದರು. ಅಲ್ಲದೆ, ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳ ತೆರವು ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ಜೈನ್ ನೇತೃತ್ವದ ಬೆಸ್ಕಾಂ ಹಾಗೂ ಪಾಲಿಕೆಯ ಅಧಿಕಾರಿಗಳ ಉನ್ನತ ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.